ಹಾಸನ, ಜ.24 (Daijiworld News/PY) : ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ಸಾಧನೆಯ ಹಿಂದಿನ ಕಾರಣ ಸಾಮೂಹಿಕ ನಕಲು ಎಂಬ ಮಾಹಿತಿ ಹೊರಬಿದ್ದಿದೆ.
ಸಾಂದರ್ಭಿಕ ಚಿತ್ರ
ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಸಾಮೂಹಿಕ ನಕಲು ಕಾರಣ ಎಂದು ಶಿವಕುಮಾರ್ ಎಂಬ ಹೆಸರಿನಲ್ಲಿ ನೊಂದ ಶಿಕ್ಷಕರೊಬ್ಬರು ಪತ್ರ ಬರೆದಿದ್ದಾರೆ.
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಳಿಸಲು ಉಪನಿರ್ದೇಶಕರಾದ ಮಂಜುನಾಥ್ ಅವರು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಲು ಅನುಕೂಲ ಮಾಡಿಕೊಡಲು ಮೌಖಿಕ ಆದೇಶ ನೀಡಿದ್ದರು. ಇದರೊಂದಿಗೆ ಚನ್ನರಾಯಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾವತಿ ಅವರು ನಕಲು ಮಾಡಿಸಲು ಮಾರ್ಗದರ್ಶನ ನೀಡಿದ್ದರು. ಹೀಗಾಗಿ ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದಿದ್ದಾರೆ.
ಪ್ರಸಕ್ತ ವರ್ಷದಲ್ಲೂ ಕೂಡಾ ಈ ರೀತಿಯಾದ ಗೋಲ್ಮಾಲ್ ನಡೆಸಲು ಸಿದ್ದತೆ ನಡೆಸುತ್ತಿದ್ದು, ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ ಅವರು ಕೂಡ ಏರ್ಪಾಟು ನಡೆಸಿದ್ದಾರೆ. ಈ ಸಲುವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ನೈಜತೆಯನ್ನು ಕಾಪಾಡುವಂತೆ ಕರ್ನಾಟಕ ಫ್ರೌಡ ಶಾಲಾ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಶಿಕ್ಷಕರೊಬ್ಬರು ಪತ್ರ ಬರೆದಿದ್ದಾರೆ.
ಈ ಪತ್ರದ ವಿಚಾರವಾಗಿ, ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿ, ಕಟ್ಟಿನಿಟ್ಟಿನ ಕ್ರಮದೊಂದಿಗೆ, ಪಾರದರ್ಶಕವಾಗಿ ಪರೀಕ್ಷೆ ಮಾಡಬೇಕೆಂದು ಸೂಚನೆ ನೀಡಿದ್ದು, ಶಿವಕುಮಾರ್ ಎಂಬ ಹೆಸರಿನಲ್ಲಿ ಬಂದ ಪತ್ರ ವಿಚಾರವಾಗಿಯೂ ತನಿಖೆ ನಡೆಯುತ್ತಿದೆ. ಚೆನ್ನರಾಯಪಟ್ಟಣದಲ್ಲಿ ಶಿವಕುಮಾರ್ ಹೆಸರಿನ ಶಿಕ್ಷಕರಿದ್ದು ಅವರನ್ನು ವಿಚಾರಣೆ ಮಾಡಲಾಗುವುದು ಎಂದು ಡಿಡಿಪಿಐ ಪ್ರಕಾಶ್ ತಿಳಿಸಿದ್ದಾರೆ.