ಬೆಂಗಳೂರು, ಜ 24 (Daijiworld News/MB) : ರಾಜ್ಯದಲ್ಲಿ ಇನ್ನು ಮುಂದೆ ಜಿಲ್ಲಾಧಿಕಾರಿ ಹೆಸರನ್ನು ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದು 'ಕಲೆಕ್ಟರ್' ಎಂದು ಹೆಸರು ಬದಲು ಮಾಡುವ ಚಿಂತನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲಾ ಕಡೆಗಳಲ್ಲಿ ಜಿಲ್ಲಾಧಿಕಾರಿಯನ್ನು ಕಲೆಕ್ಟರ್ ಎಂದು ಕರೆಯುತ್ತಾರೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲೂ ಕಲೆಕ್ಟರ್ ಎಂದು ಕರೆಯುತ್ತಾರೆ. ಕಂದಾಯ ಮತ್ತು ಮಾರಾಟ ತೆರಿಗೆ, ಅಬಕಾರಿ ಇಲಾಖೆಯಲ್ಲೂ ಡಿಸಿ ಎಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಆಡಳಿತದ ಮುಖ್ಯ ವ್ಯಕ್ತಿಯಾದ ಜಿಲ್ಲಾಧಿಕಾರಿಗಳನ್ನು ಈ ಹೆಸರಿನಲ್ಲಿ ಕರೆಯುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕಲೆಕ್ಟರ್ ಎಮದು ಕರೆಯುವುದು ಸರಿ ಎಂದು ಆ ಹೆಸರನ್ನೇ ನಾಮಕರಣ ಮಾಡುವ ಚಿಂತನೆಯಿದೆ. ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.
ಭೂ ಪರಿವರ್ತನೆ ಆಗದ ಹಾಗೂ ಅಕ್ರಮ ನಿವೇಶನಗಳ ನೊಂದಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ನಿವೇಶನಗಳ ನೋಂದಣಿ ಪ್ರಕ್ರಿಯೆ ಸ್ಥಗಿತ ಮಾಡಸಲಾಗಿದೆ. ಕಂದಾಯ ಇಲಾಖೆಯ ಕಾವೇರಿ ತಂತ್ರಾಂಶದಲ್ಲೂ ಇಂತಹ ನಿವೇಶನಗಳನ್ನು ನೋಂದಣಿಗೆ ಸ್ವೀಕಾರ ಮಾಡುತ್ತಿಲ್ಲ. ಈ ಕುರಿತು ಪರ ಹಾಗೂ ವಿರೋಧವಿದ್ದು ಮಾಹಿತಿ ಪಡೆದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.