ಮೈಸೂರು, ಜ.24 (Daijiworld News/PY) : "ಕಾಂಗ್ರೆಸ್ ಅಧ್ಯಕ್ಷ-ಕಾರ್ಯಾಧ್ಯಕ್ಷರ ನೇಮಕಾತಿಯ ಬಗ್ಗೆ ಬಹಿರಂಗವಾಗಿ ಯಾರು ಹೇಳಿಕೆ ನೀಡುವಂತಿಲ್ಲ" ಎಂದು ಕಾಂಗ್ರೆಸ್ ಮುಖಂಡರುಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಅವರು, "ಕೆ.ಪಿ.ಸಿ.ಸಿ. ಅಧ್ಯಕ್ಷ-ಕಾರ್ಯಾಧ್ಯಕ್ಷರ ನೇಮಕಾತಿಯ ಬಗ್ಗೆ ಯಾರೂ ಮಾತನಾಡುವಂತಿಲ್ಲ, 4 ಕಾರ್ಯಾಧ್ಯಕ್ಷರ ನೇಮಕವಾಗುತ್ತೆ ಎಂಬ ವಿಚಾರವಾಗಿ ಯಾರೂ ಹೇಳಿಲ್ಲ, ಆದರೆ ಅಧ್ಯಕ್ಷರ ನೇಮಕದ ವೇಳೆ ಕಾರ್ಯಾಧ್ಯಕ್ಷರನ್ನು ನೇಮಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ" ಎಂದರು.
"ಕಾರ್ಯಾಧ್ಯಕ್ಷರ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಕ್ಷ ಸಂಘಟನೆಗೆ ಕಾರ್ಯಾಧ್ಯಕ್ಷರ ನೇಮಕದಿಂದ ಅನುಕೂಲವಾಗುತ್ತೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ. ಕಾರ್ಯಾಧ್ಯಕ್ಷರ ನೇಮಕವನ್ನು ಮಾಡಬೇಕಾ, ಬೇಡವಾ ಅಥವಾ ಮಾಡುವುದಾದರೆ ಇಬ್ಬರು ಅಥವಾ ಮೂವರೋ, ನಾಲ್ವರೋ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ" ಎಂದು ಹೇಳಿದರು.
ಈ ಸಂದರ್ಭ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಪ್ರತಿಕ್ರಿಯಿಸಿದ ಗುಂಡೂರಾವ್, "ಶೀಘ್ರವೇ ಬಿಜೆಪಿಯವರು ತಮ್ಮ ಗೊಂದಲ ನಿವಾರಣೆ ಮಾಡಿಕೊಳ್ಳಬೇಕು. ಎಲ್ಲರಿಗೂ ಸಚಿವ ಸ್ಥಾನ ನೀಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಈ ವಿಚಾರವಾಗಿ ಅವರ ಹೈಕಮಾಂಡ್ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ತಡವಾಗುತ್ತಿದ್ದು, ಇಲಾಖೆಯಲ್ಲಿ ಸಚಿವರಿಲ್ಲದೆ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ" ಎಂದು ತಿಳಿಸಿದರು.