ತುಮಕೂರು, ಜ 24 (Daijiworld News/MB) : ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಟ್ಟು ಬಿಜೆಪಿಗೆ ಮಂತ್ರಿಯಾಗಲೆಂದೇ ಸೇರಿ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಹಾಗಿದ್ದು ಅವರು ಮಂತ್ರಿಯಾಗದಿದ್ದಲ್ಲಿ ಅವರ ಜೀವ ಹೋಗುತ್ತದೆ. ಇಲ್ಲದಿದ್ದಲ್ಲಿ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಜೆಡಿಎಸ್ನ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಹೇಳಿದ್ದಾರೆ.
ಶುಕ್ರವಾರ ಮಾಧ್ಯಮದವರಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ನಂಬಿಕಸ್ತರು. ಅವರು ಕೊಟ್ಟ ಮಾತಿನಂತೆ ನಡೆದು ಕೊಟ್ಟ ಮಾತು ಉಳಿಸುವ ನಾಯಕ. ಈಗ ಅವರಿಗೆ ತಾತ್ಕಾಲಿಕವಾಗಿ ಹಿನ್ನಡೆ ಆಗಿರಬಹುದು ಎಂದು ಹೇಳಿದರು.
ಅವರ ಹೈಕಮಾಂಡ್ ಅವರಿಗೆ ಸದ್ಯ ಸಂಪೂರ್ಣ ಸ್ವಾತಂತ್ರ್ಯ ನೀಡದೆ ಇರಬಹುದು. ಆದರೆ ಯಡಿಯೂರಪ್ಪ ಅವರು ಏನೇ ಕಷ್ಟ ಎದುರಾದರೂ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಅದರಂತೆ ನಡೆಯುತ್ತಾರೆ. ಅವರಲ್ಲಿ ದಿಟ್ಟವಾದ ನಾಯಕತ್ವ ಗುಣವಿದೆ ಎಂದರು.
ಜ.23ರಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಗೆ ನಾನು ತಡವಾಗಿ ಹೋದ ಹಿನ್ನಲೆಯಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.