ನವದೆಹಲಿ,ಜ.24 (Daijiworld News/PY) : ವಿಶ್ವವಿದ್ಯಾಲಯಯದ ಗುತ್ತಿಗೆ ಸಿಬ್ಬಂದಿಗೆ ತಗಲುವ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳಬಾರದು. ಶೈಕ್ಷಣಿಕ ಕ್ಷೇತ್ರವನ್ನು ಕಡೆಗಣಿಸಬಾರದು, ಜೆಎನ್ಯು ವಿವಿಯ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಒಂದು ವಾರ ಕಾಲಾವಕಾಶ ನೀಡಬೇಕು ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಶುಕ್ರವಾರ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ದರ್, ಹೊಸ ಶುಲ್ಕ ಹೆಚ್ಚಳವನ್ನು ವಿದ್ಯಾರ್ಥಿಗಳಿಂದ ಪಡೆಯದೆ, ಹಳೆಯ ಶುಲ್ಕವನ್ನು ಪಾವತಿಸಲು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಶೆ ಘೋಷ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಹೈಕೋರ್ಟ್ಗೆ ಮನವಿ ಸಲ್ಲಿಸಿ ಶುಲ್ಕ ಹೆಚ್ಚಳವನ್ನು ತೆಗೆದುಹಾಕುವಂತೆ ಹಾಗೂ ಮುಂದಿನ ಸೆಮಿಸ್ಟರ್ಗೆ ಕಾಲಾವಕಾಶ ನೀಡುವಂತೆ ಕೇಳಿದ್ದರು. ಇದಕ್ಕೂ ಮೊದಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು, ಶೇ.90ರಷ್ಟು ವಿದ್ಯಾರ್ಥಿಗಳು ಈಗಾಗಲೇ ಹೊಸದಾಗಿ ಶುಲ್ಕ ಹೆಚ್ಚಳ ಸಂಬಂಧ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಈ ಅರ್ಜಿಯನ್ನು ತೆಗೆದುಹಾಕುವಂತೆ ಹೇಳಿದರು.
ಸಾಲಿಸಿಟರ್ ಜನರಲ್ ಅವರ ವಾದಕ್ಕೆ ಒಪ್ಪಿಗೆ ನೀಡದ ನ್ಯಾಯಾಧೀಶರು, ಸರ್ಕಾರಿ ವಕೀಲರ ನಿಯಮದಂತೆ ಶುಲ್ಕ ಹೆಚ್ಚಿಸಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಯನ್ನು ಗುತ್ತಿಗೆಯ ಆಧಾರದ ಮೇಲೆ ನಿಯೋಜಿಸಲಾಗುತ್ತಿದೆ. ಇದಕ್ಕೆ ಹಣಕಾಸು ಹೊಂದಿಸಲು ಶುಲ್ಕ ಹೆಚ್ಚಳ ಅಗತ್ಯ ಎಂದರು.
ಬಳಿಕ ಮಾತನಾಡಿದ ನ್ಯಾಯಾಧೀಶರು, ಗುತ್ತಿಗೆ ಸಿಬ್ಬಂದಿಗೆ ತಗುಲುವ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳಬಾರದು, ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹಣಕಾಸಿನ ನೆರವು ನೀಡಬೇಕು. ಈ ಕ್ಷೇತ್ರವನ್ನು ಕಡೆಗಣಿಸಬಾರದು ಹಾಗೂ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಒಂದು ವಾರ ಕಾಲಾವಕಾಶ ನೀಡಬೇಕು ಎಂದು ತಿಳಿಸಿದೆ.