ನವದೆಹಲಿ, ಜ.24 (Daijiworld News/PY): "ಕೇಸ್ಗಳು ರಾಜಕೀಯದಲ್ಲಿ ಸಾಮಾನ್ಯ. ರಾಜಕೀಯದಲ್ಲಿ ಕೇಸ್ ಇಲ್ಲದವರಿಲ್ಲ" ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, "ಕೇಸ್ಗಳು ರಾಜಕೀಯದಲ್ಲಿ ಸಾಮಾನ್ಯ. ಕೇಸ್ ಯಾರ ಮೇಲೆ ಇಲ್ಲ ಹೇಳಿ. ಉದ್ದೇಶ ಪೂರ್ವಕವಾಗಿ ರಾಜಕೀಯದಲ್ಲಿ ಕೇಸ್ ಹಾಕಲಾಗುತ್ತದೆ. ಬಂಗಾರಪ್ಪ ಸಿಎಂ ಆದ ಕಾಲದಿಂದ ಕುಮಾರಸ್ವಾಮಿ ಸರ್ಕಾರದವರೆಗೂ ನನ್ನ ಮೇಲೆ ಯಾವುದಾದರೂ ತನಿಖೆಯಾಗಿದೆಯಾ" ಎಂದು ಕೇಳಿದರು.
"ಕೆಲವು ದಾಖಲೆಗಳನ್ನು ಇಡಿ ಅಧಿಕಾರಿಗಳಿಗೆ ನೀಡಬೇಕಿತ್ತು. ಕೋರ್ಟ್ ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದೇನೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿಲ್ಲ. ಯಾರನ್ನು ಭೇಟಿ ಮಾಡಿಲ್ಲ" ಎಂದು ಹೇಳಿದರು.
"ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ ಮೇಲಿದ್ದ ಎಲ್ಲಾ ಆರೋಪಗಳಿಂದ ನಾನು ಮುಕ್ತನಾಗಿದ್ದೇನೆ. ಯಾವ ಭ್ರಷ್ಟಾಚಾರದ ಒತ್ತುವರಿ ಕೇಸ್ ನನ್ನ ಮೇಲಿಲ್ಲ. ನನ್ನ ವಿಚಾರವಾಗಿ ಪಕ್ಷದಲ್ಲಿ ಯಾರೂ ಮಾತನಾಡುವುದಿಲ್ಲ. ಪಕ್ಷದಲ್ಲಿ ನನ್ನ ಬಗ್ಗೆ ಮಾತನಾಡಿದ ರಿಪೋರ್ಟ್ ಇದ್ದರೆ ನೀಡಿ" ಎಂದರು.
"ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರು ರಾಜೀನಾಮೆ ಅಂಗೀಕಾರ ಮಾಡಿಲ್ಲ, ಅವರು ಕಾರ್ಯ ನಿರ್ವಹಿಸುತ್ತಿದ್ಧಾರೆ. ಪಕ್ಷದಲ್ಲಿ ಈಗ ಇರುವವರು ಸಮರ್ಥರಾಗಿದ್ದಾರೆ. ಕಾಂಗ್ರೆಸ್ನಲ್ಲಿ ಗುಂಪುಗಾರಿಕೆಯಿಲ್ಲ. ನಾನು ಗುಂಪು ಕಟ್ಟಲು ಹೋಗುವುದಿಲ್ಲ" ಎಂದು ಹೇಳಿದರು.
"ನಾನು ದೇವರು, ಧರ್ಮವನ್ನು ನಂಬುವವನು. ಕೆಲವು ಕಾರ್ಯಕರ್ತರು ಹರಕೆ ಹೊತ್ತಿದ್ದ ಕಾರಣ ಅದನ್ನು ತೀರಿಸುವ ಜವಾಬ್ದಾರಿ ಇತ್ತು. ಆದ್ದರಿಂದ ಮಧ್ಯಪ್ರದೇಶ ಗ್ವಾಲಿಯರ್ ಬಳಿ ಇರುವ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ಬಂದಿದ್ದೇನೆ" ಎಂದು ತಿಳಿಸಿದರು.