ಬೆಂಗಳೂರು, ಜ 25 (Dajiworld News/MB) : ಎಷ್ಟೆ ಓದಿದ್ದರೂ ಸಂದರ್ಶನದಲ್ಲಿ ಕಷ್ಟಪಡೋ ಅಭ್ಯರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಸಂದರ್ಶನ ವ್ಯವಸ್ಥೆ ರದ್ದು ಮಾಡಿದ್ದು, ನೇರ ನೇಮಕಾತಿ ಮೂಲಕ ಹುದ್ದೆ ಭರ್ತಿಗೆ ನಿಯಮ ರೂಪಿಸಿದೆ.
ಈಗಾಗಲೇ ಸಿ ಗ್ರೂಪ್ ಹುದ್ದೆಗಳಿಗೆ ಸಂದರ್ಶನ ವ್ಯವಸ್ಥೆ ರದ್ದು ಮಾಡಲಾಗಿದ್ದು ನೇಮಕಾತಿಯಲ್ಲಿ ಇನ್ನಷ್ಟೂ ಪಾರದರ್ಶಕತೆ ತರುವ ಉದ್ದೇಶದಿಂದ ಈಗ ಎ ಮತ್ತು ಬಿ ಗ್ರೂಪ್ ಹುದ್ದೆಗಳ ಸಂದರ್ಶನ ವ್ಯವಸ್ಥೆ ರದ್ದು ಮಾಡಲಾಗಿದೆ.
ಆದರೆ ಈ ವ್ಯವಸ್ಥೆಯನ್ನು ಎಲ್ಲಾ ಹುದ್ದೆಗಳಿಗೂ ಜಾರಿ ಮಾಡಲಾಗುವುದಿಲ್ಲ. ನಿಯಮಿತ ಮತ್ತು ಸರ್ಕಾರ ನಿರ್ಧಾರ ಮಾಡುವ ಹುದ್ದೆಗಳಿಗೆ ಮಾತ್ರ ಸಂದರ್ಶನ ವ್ಯವಸ್ಥೆ ರದ್ದು ಮಾಡಲಾಗುತ್ತದೆ.
ಈ ಕರಡು ನಿಯಮದ ಪ್ರಕಾರವಾಗಿ ಇನ್ನು ಮುಂದೆ ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಪಡೆದ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಶ್ರೇಣಿ ಆಧಾರದಲ್ಲಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಹೊಸ ವ್ಯವಸ್ಥೆಯ ಕರಡು ನಿಯಮವನ್ನು ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಇದ್ದರೆ ಅಥವಾ ಸಲಹೆಗಳು ಇದ್ದರೆ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗಕ್ಕೆ ಪತ್ರದ ಮುಖೇನ ತಿಳಿಸಬಹುದಾಗಿದೆ.