ಕೊಚ್ಚಿ, ಜ 25 (Dajiworld News/MB) : ಚೀನಾದಲ್ಲಿ ಕಂಡು ಬಂದ ಕೊರೋನಾ ವೈರಸ್ನ ಭಯ ಭಾರತದಲ್ಲೂ ಆರಂಭವಾಗಿದ್ದು ಚೀನಾದಿಂದ ಭಾರತಕ್ಕೆ ವಾಪಾಸ್ ಆದ 11 ಮಂದಿಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಕೇರಳದಲ್ಲಿ 7 ಮಂದಿ, ಮುಂಬೈನಲ್ಲಿ 2 ಮಂದಿ ಹಾಗೂ ಬೆಂಗಳೂರಿನಲ್ಲಿ ಒಬ್ಬರನ್ನು, ಹೈದರಾಬಾದ್ನಲ್ಲಿ ಒಬ್ಬರನ್ನು ಪ್ರತ್ಯೇಕ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ
ಕೇರಳದಲ್ಲಿ 7 ಜನರಿಗೆ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿದ್ದು ಅವರನ್ನು ಶುಕ್ರವಾರ ಪ್ರತ್ಯೇಕ ಕೋಣೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೈದಾರಾಬಾದ್, ಮುಂಬೈ, ಬೆಂಗಳೂರಿನಲ್ಲಿ ಕೊರೋನಾ ವೈರಸ್ ಇರುವ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದ್ದ ವ್ಯಕ್ತಿಗಳ ರಕ್ತ ಪರೀಕ್ಷೆಯಿಂದ ಅವರಿಗೆ ಕೊರೋನಾ ವೈರಸ್ ಇಲ್ಲ ಎಂದು ಖಚಿತವಾಗಿದೆ.
ಕೇರಳದಲ್ಲಿ ಒಟ್ಟು 80 ಜನರನ್ನು ತೀವ್ರ ನಿಗಾ ವಹಿಸಿದ್ದು ಈ ಪೈಕಿ 73 ಜನರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿಲ್ಲ. ಆದರೆ 7 ಜನರಲ್ಲಿ ಕೆಮ್ಮು, ಜ್ವರದಂತಹ ಕೊರೋನಾ ಲಕ್ಷಣಗಳು ಕಂಡು ಬಂದಿದೆ. ಈ 7 ಜನರ ಪೈಕಿ ಓರ್ವನಲ್ಲಿ ಪ್ರಮುಖ ಲಕ್ಷಣಗಳು ಇಲ್ಲವಾದರೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಹಾಗೂ ದೈರ್ಯ ತುಂಬಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಹಾಗೆಯೇ ಸೌದಿ ಅರೇಬಿಯಾದಲ್ಲಿ ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆಂದು ಹೇಳಲಾಗುತ್ತಿದ್ದ ಕೇರಳ ಮೂಲದ ನರ್ಸ್ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ.