ಮುಂಬೈ, ಜ 25 (Dajiworld News/MB) : "ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದಿಂದ ಭಾರತಕ್ಕೆ ಬಂದಿರುವ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕು. ಆ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
"ಯಾರು ವಿರೋಧ ಮಾಡಿದರೂ ನೆರೆ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮರನ್ನು ಹೊರಗಟ್ಟಬೇಕು ಅನ್ನುವ ವಿಚಾರದಲ್ಲಿ ಬೇರೆ ಮಾತಿಲ್ಲ. ಹಿಂದುತ್ವಕ್ಕಾಗಿ ಶಿವಸೇನೆ ಹೋರಾಟ ಮಾಡುತ್ತಾ ಬಂದಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಹಲವು ದೋಷಗಳು ಇರುವ ಹಿನ್ನಲೆಯಲ್ಲಿ ಶಿವಸೇನೆ ಈ ಕಾಯ್ದೆಯನ್ನು ವಿರೋಧ ಮಾಡುತ್ತಿದೆ" ಎಂದು ಹೇಳಿದೆ.
ಹಾಗೆಯೇ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಎಂಎನ್ಎಸ್ ಇತ್ತೀಚೆಗೆ ತನ್ನ ಧ್ವಜವನ್ನು ಬದಲು ಮಾಡಿರುವುದನ್ನು ಹಾಗೂ ಹಿಂದುತ್ವದ ಕುರಿತು ಮಾತನಾಡುತ್ತಿರುವ ರಾಜ್ ಠಾಕ್ರೆ ಅವರನ್ನು ಟೀಕೆ ಮಾಡಿದ್ದು "ಮರಾಠಿಗರ ವಿಷಯವನ್ನು ಇಟ್ಟುಕೊಂಡು 14 ವರ್ಷಗಳ ಹಿಂದೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಆರಂಭವಾಗಿದೆ. ಆದರೆ ಇಂದು ಅದು ಸಂಪೂರ್ಣವಾಗಿ ಹಿಂದೂ ಧರ್ಮದತ್ತ ಮುಖಮಾಡಿದೆ. ಇದಕ್ಕೆ ಸಾಕ್ಷಿ ಹೊಸದಾಗಿ ಅನಾವರಣಗೊಂಡ ಪಕ್ಷದ ಧ್ವಜ. ಅವರಲ್ಲಿರುವ ಗೊಂದಲಗಳಿಗೆ ಹಿಡಿದ ಕೈಗನ್ನಡಿ ಇದು" ಎಂದು ಬರೆಯಲಾಗಿದೆ.
"ಮರಾಠಿಗರ ವಿಷಯದಲ್ಲಿ ಶಿವಸೇನೆ ಸಾಕಷ್ಟು ಕೆಲಸ ಮಾಡಿದೆ. ಹಾಗಾಗಿ ಮರಾಠಿಗರ ಮನಸ್ಸಲ್ಲಿ ಶಿವಸೇನೆ ಶಾಶ್ವತವಾಗಿ ಇರುತ್ತದೆ. ಹಾಗೆಯೇ ಶಿವಸೇನೆ ತೀವ್ರವಾದ ಹಿಂದುತ್ವದ ವಿಷಯದ ಬಗ್ಗೆಯೂ ಕಾರ್ಯ ನಿರ್ವಹಿಸಿದೆ. ಹಿಂದುತ್ವದ ಕೇಸರಿ ಬಣ್ಣವನ್ನು ಶಿವಸೇನೆ ಎಂದಿಗೂ ಬಿಟ್ಟಿಲ್ಲ. ರಾಜ್ ಠಾಕ್ರೆ ಈಗ ಅದರ ಬೆನ್ನಿಗೆ ಬಿದಿದ್ದಾರೆ" ಎಂದು ಹೇಳಿದೆ.