ನವದೆಹಲಿ, ಜ 25 (Dajiworld News/MB) : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗ ಲಂಡನ್ನಿಂದ ಪ್ರಕಟವಾಗುವ 'ದಿ ಇಕನಾಮಿಸ್ಟ್' ಪತ್ರಿಕೆ ಕೂಡಾ ಈ ಕಾಯ್ದೆಯನ್ನು ಟೀಕೆ ಮಾಡಿ , "ಈ ಕಾಯ್ದೆ ಪ್ರಚೋದನೆ ಮಾಡುವ ದಶಕದ ಯೋಜನೆ" ಎಂದಿದ್ದು ಲೇಖನಕ್ಕೆ 'ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ವಿಭಜನೆ ಮಾಡಿದ ನರೇಂದ್ರ ಮೋದಿ' ಎಂದು ಶೀರ್ಷಿಕೆ ನೀಡಿದ್ದಾರೆ.
'ದಿ ಇಕನಾಮಿಸ್ಟ್' ಪತ್ರಿಕೆಯ ಅಸಹಿಷ್ಣು ಭಾರತ ಎಂಬ ಶೀರ್ಷಿಕೆಯಡಿಯಲ್ಲಿ ಈ ಲೇಖನ ಪ್ರಕಟವಾಗಿದ್ದು, ಸಹಿಷ್ಣು ಹಾಗೂ ಬಹು ಧರ್ಮವನ್ನು ಹೊಂದಿರುವ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡುವ ನರೇಂದ್ರ ಮೋದಿಯವರ ಗುರಿಯನ್ನು ವಿದ್ಯಾರ್ಥಿಗಳು, ಜಾತ್ಯತೀತವಾದಿಗಳು ಮಾತ್ರವಲ್ಲದೇ ಮಂಕಾಗಿದ್ದ ಮಾಧ್ಯಮಗಳು ಕೂಡಾ ವಿರೋಧ ಮಾಡಲು ಆರಂಭ ಮಾಡಿದೆ.
ಈ ಕಾಯ್ದೆಗಳು ಭಾರತದ ಅತೀ ದೊಡ್ಡ ಪ್ರಜಾಪ್ರಭುತ್ವ ಎಂಬ ಸ್ಫೂರ್ತಿದಾಯಕ ಕಲ್ಪನೆಯನ್ನು ದುರ್ಬಳಗೊಳಿಸುತ್ತಿದೆ. ನರೇಂದ್ರ ಮೋದಿಯವರು ಜಾರಿ ಮಾಡಿರುವ ಈ ಕಾಯ್ದೆಗಳು ಸಂವಿಧಾನದ ಜಾತ್ಯತೀತ ತತ್ವಗಳನ್ನು ದುರ್ಬಲಗೊಳಿಸುತ್ತದೆ, ಪ್ರಜಾಪ್ರಭುತ್ವಕ್ಕೆ ಹಾನಿ ಉಂಟು ಮಾಡುತ್ತದೆ. ಇದರಿಂದಾಗಿ ರಕ್ತಪಾತವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಮೋದಿ ಹಿಂದೂ ರಾಷ್ಟ್ರವನ್ನು ನಿರ್ಮಿಸುತ್ತಿದ್ದಾರೆ ಎಂಬ ಭೀತಿ ಭಾರತದ 200 ಮಿಲಿಯನ್ ಮುಸ್ಲಿಮರಲ್ಲಿದೆ. 1980 ದಶಕದಲ್ಲಿ ರಾಮ ಮಂದಿರ ಅಭಿಯಾನ ನಡೆಸಿ ಬಿಜೆಪಿ ದೇಶದಲ್ಲಿ ಬಲಿಷ್ಠವಾಯಿತು. ಧರ್ಮ ಹಾಗೂ ರಾಷ್ಟ್ರೀಯ ಗುರುತಿನ ಹೆಸರಿನಲ್ಲಿ ದೇಶದ ಜನರ ನಡುವೆ ಒಡಕು ಮೂಡಿಸಿ ಬಿಜೆಪಿ ಮತ್ತು ಮೋದಿ ಲಾಭ ಪಡೆಯುವ ಸಾಧ್ಯತೆಯಿದೆ.
ಅಕ್ರಮವಾಗಿ ವಿದೇಶದಿಂದ ಭಾರತಕ್ಕೆ ಬಂದಿರುವವರ ಪತ್ತೆ ಮಾಡುವ ಪ್ರಕ್ರಿಯೆಯಲ್ಲಿ ಭಾರತೀಯರ ನೋಂದಣಿ ಪಟ್ಟಿ ಮಾಡುವ ಯೋಜನೆ ದೇಶದ ಎಲ್ಲಾ ಜನರಿಗೆ ಪರಿಣಾಮ ಭೀರಲಿದೆ. ಭಾರತದವರು ಯಾರೂ ಮತ್ತು ವಿದೇಶಿಗರು ಯಾರೂ ಎಂದು ಪತ್ತೆ ಹಚ್ಚುವುದು, ಅವರ ಪಟ್ಟಿ ಸಂಗ್ರಹ ಮಾಡಿ ನ್ಯಾಯಾಲಯದಲ್ಲಿ ಪರಿಷ್ಕರಣೆ ಮಾಡುವುದು ಹೀಗೆ ಎಲ್ಲಾ ಮುಕ್ತಾಯವಾಗಲು ಸುಮಾರು 10 ವರ್ಷಗಳಾಗುತ್ತದೆ ಎಂದು ತಿಳಿಸಿದೆ.
ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆ ಕುಂಟಿತವಾಗುತ್ತಿರುವುದನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಕಾಯ್ದೆ ಸಹಕಾರಿಯಾಗಲಿದೆ. ಇನ್ನು ಮೋದಿಯನ್ನು ಪ್ರಧಾನ ಮಂತ್ರಿಯಾಗಿ ಕಚೇರಿಯಲ್ಲೇ ಉಳಿಸಿಕೊಳ್ಳುವುದು ಸೂಕ್ತವಲ್ಲ ಎಂದು ಲೇಖನ ತಿಳಿಸಿದೆ.
ಹಾಗೆಯೇ ಈ ಲೇಖನದ ಕೊನೆಯ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ ಹಾಕುವವರ ಮನಗೆಲ್ಲಲು ವಿಶ್ವದ ಎರಡು ಉತ್ತಮ ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ಬದಲು ಬೇರೆ ದಾರಿ ಕಂಡು ಕೊಳ್ಳಬೇಕು ಎಂದು ಸಲಹೆ ನೀಡಿದೆ.
ಈ ಲೇಖನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ವಿದೇಶಿ ಕಾರ್ಯನೀತಿ ವಿಭಾಗದ ಮುಖ್ಯಸ್ಥ ವಿಜಯ್ ಚೌತಾಯಿವಾಲೆ, "ಇದು ಇಕನಾಮಿಕ್ಸ್ ಪತ್ರಿಕೆಯ ವಸಾಹಾತುಶಾಹಿ ಮನಸ್ಥಿತಿ ಹಾಗೂ ಅಹಂಕಾರವಾಗಿದೆ" ಎಂದು ಟೀಕೆ ಮಾಡಿದ್ದಾರೆ.
"ನಾವು ಬ್ರಿಟಿಷರು ಭಾರತವನ್ನು ಬಿಟ್ಟು 1947ರಲ್ಲಿ ತೆರಳಿದ್ದಾರೆ ಎಂದು ಭಾವಿಸಿದ್ದೇವೆ. ಆದರೆ ದಿ ಇಕನಾಮಿಸ್ಟ್ ಪತ್ರಿಕೆಯ ಸಂಪಾದಕರು ಇನ್ನೂ ವಸಹಾತುಶಾಹಿ ಯುಗದಲ್ಲೇ ಇದ್ದಾರೆ. ಮೋದಿಗೆ ಮತ ಹಾಕಬೇಡಿ ಎಂದು ನೀವು ನೀಡಿದ ಸೂಚನೆಯನ್ನು ಭಾರತದ ಜನರು ಪರಿಗಣನೆಗೆಯೇ ತೆಗೆದುಕೊಂಡಿಲ್ಲ ಎಂದು ಸಂಪಾದಕರು ಕೋಪಗೊಂಡಿದ್ದಾರೆ" ಎಂದು ವಿಜಯ್ ಅವರು ಟ್ವೀಟ್ ಮಾಡಿದ್ದಾರೆ.