ನವದೆಹಲಿ, ಜ.25 (Daijiworld News/PY) : ನಿರ್ಭಯಾ ಪ್ರಕರಣದ ಆರೋಪಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ಕೋರ್ಟ್ ಮೆಟ್ಟಿಲೇರಿದ್ದು, ಅಪರಾಧಿ ಮುಕೇಶ್ ಸಿಂಗ್ ಈ ವಿಚಾರವಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ ಎಂದು ಮುಕೇಶ್ ಪರ ವಕೀಲ ವೃಂದಾ ಗ್ರೋವರ್ ತಿಳಿಸಿದ್ದಾರೆ.
ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಇಬ್ಬರು ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ ಹಾಗೂ ವಿನಯ್ ಕುಮಾರ್ ಶರ್ಮಾ ಅವರು ಇತ್ತೀಚೆಗೆ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿತ್ತು. ಬಳಿಕ ಇಬ್ಬರು ಅಪರಾಧಿಗಳು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದು ಅದನ್ನು ಸಹ ಸುಪ್ರೀಂ ತಿರಸ್ಕರಿಸಿತ್ತು. ಈ ನಡುವೆ ನಿರ್ಭಯಾ ಪ್ರಕರಣದ ಇನ್ನಿಬ್ಬರು ಅಪರಾಧಿಗಳಾದ ಅಕ್ಷಯ್ ಕುಮಾರ್ ಸಿಂಗ್ ಹಾಗೂ ಪವನ್ ಸಿಂಗ್ ಪರ ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಇನ್ನೂ ತಿಹಾರ್ ಜೈಲು ಅಧಿಕಾರಿಗಳು ನೀಡಿಲ್ಲ ಎಂದು ವಕೀಲ ಎ.ಪಿ.ಸಿಂಗ್ ಜ.24 ಶುಕ್ರವಾರ ಆರೋಪಿಸಿದ್ದಾರೆ. ಈ ವಿಚಾರವಾಗಿ ಪಟಿಯಾಲಹೌಸ್ ಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದರು.