ಬಾಗಲಕೋಟೆ, ಜ.25 (Daijiworld News/PY) : "ಸಚಿವ ಸಂಪುಟ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಿಎಸ್ವೈ ಅವರ ಹಾಗೂ ಪಕ್ಷದ ಮಧ್ಯೆ ಯಾವುದೇ ರೀತಿಯಾದ ಮುಸುಕಿನ ಗುದ್ದಾಟವಿಲ್ಲ, ಇದೆಲ್ಲವೂ ಮಾಧ್ಯಮಗಳ ಸೃಷ್ಠಿ" ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಮುಧೋಳದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉಪಚುನಾವಣೆಯಲ್ಲಿ ಸೋತವರಿಗೆ ಮಂತ್ರಿಸ್ಥಾನ ಇಲ್ಲ ಎಂಬ ವಿಷಯದ ಬಗ್ಗೆ ನನಗೆ ತಿಳಿದಿಲ್ಲ, ಸಿಎಂ ಬಿಎಸ್ವೈ ಅವರು ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ನಾನು ಅವರನ್ನು ಭೇಟಿಯಾಗಿಲ್ಲ, ಸೋಮವಾರ ಸಿಎಂ ಅವರನ್ನು ಭೇಟಿಯಾದ ಬಳಿಕ ಹೇಳುತ್ತೇನೆ" ಎಂದರು.
"ಸಚಿವ ಸ್ಥಾನ ಯಾರಿಗೆ ನೀಡಬೇಕು, ಬಿಡಬೇಕು ಎಂಬ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ" ಎಂದರು.
"ಮುಧೋಳದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಅಧಿಕವಾಗುತ್ತಿದೆ. ಅದನ್ನು ತಡೆಯುವ ಸಲುವಾಗಿ 70 ಕೋಟಿ ವೆಚ್ಚದಲ್ಲಿ 10 ಕಿ.ಮೀ ದೂರ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ಭೂಸ್ವಾಧೀನ ವೆಚ್ಚವೂ ಸೇರಿದೆ. ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದೆ. 6 ತಿಂಗಳಲ್ಲಿಯೇ ಪೂರ್ಣಗೊಳಿಸಲಾಗುವುದು" ಎಂದು ಹೇಳಿದರು.
"ಪ್ರವಾಹದಿಂದಾಗಿ ಲೋಕೋಪಯೋಗಿ ಇಲಾಖೆಗೆ 3000 ಕೋಟಿ ನಷ್ಟವಾಗಿದೆ. ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ ಇಲಾಖೆಯಿಂದಲೇ 500 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಕೇಂದ್ರದಿಂದ ಬಿಡುಗಡೆ ಮಾಡಲಾದ ಪರಿಹಾರ ಮೊತ್ತದಲ್ಲಿ ಇಲಾಖೆಗೆ ಯಾವುದೇ ವಿಶೇಷ ಪ್ಯಾಕೇಜ್ ನೀಡಿಲ್ಲ" ಎಂದು ತಿಳಿಸಿದರು.