ಆಂಧ್ರಪ್ರದೇಶ, ಜ.25 (Daijiworld News/PY): ದೇವಸ್ಥಾನವೊಂದರ ವಿಗ್ರಹವನ್ನು ಕಿಡಿಗೇಡಿಗಳು ಹಾನಿ ಮಾಡಿದ್ದು, ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಪೀಠಪುರಂನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ಬಗ್ಗೆ ದೂರುದಾಖಲಿಸಿದ ಎಸ್ ಸತ್ತಿರಾಜು ಅವರು ನಗರದಲ್ಲಿನ ಇತರ ಕಡೆಯಲ್ಲಿರುವ ದೇವಾಲಯಗಳ ವಿಗ್ರಹಗಳನ್ನು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಲಂಕ ದಿನಕರ್, ರಾಜ್ಯದಲ್ಲಿ ಇಂತಹ ಘಟನೆಗಳಾದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಂಧ್ರಪ್ರದೇಶದಲ್ಲಿ ಈ ರೀತಿಯಾದ ಘಟನೆಗಳು ನಡೆಯುತ್ತಿವೆ. ದೇವಾಲಯಗಳ ವಿಗ್ರಹಗಳನ್ನು ಹಾನಿಗೊಳಿಸುವವರ ವಿರುದ್ದ ಕಟ್ಟು ನಿಟ್ಟಾದ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಪೀಠಪುರಂ ದೇವಾಲಯ ಪಟ್ಟಣವು 18 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಪುರುಹುತಿಕ ದೇವಿ ಈ ದೇವಾಲಯದ ದೇವತೆಯಾಗಿ ನೆಲೆಸಿದ್ದಾಳೆ. ಈ ಪಟ್ಟಣವನ್ನು ದತ್ತ ಕ್ಷೇತ್ರ ಹಾಗೂ ಪಾಡ ಗಯಾ ಕ್ಷೇತ್ರ ಎಂದೂ ಕರೆಯಲಾಗುತ್ತದೆ.
ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೀಠಪುರಂ ಪೊಲೀಸ್ ಠಾಣೆಯ ಅಧಿಕಾರಿ ಅಬ್ದುಲ್ ನದೀಮ್ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.