ಮೈಸೂರು, ಜ.25 (Daijiworld News/PY) : "ಸಿಎಂ ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದು ನಿಜ. ಆದರೆ, ಕ್ಷೇತ್ರ ಉಳಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಕೊಟ್ಟ ಮಾತು ಏನು ಎಂಬುದು ಅವರಿಗೆ ಗೊತ್ತಿದೆ. ಅದನ್ನು ಉಳಿಸಿಕೊಂಡರೆ ಸಾಕು" ಎಂದು ಬಿಜೆಪಿ ಮುಖಂಡ ಅಡಗೂರು ಎಚ್.ವಿಶ್ವನಾಥ್ ಹೇಳಿದ್ದಾರೆ.
ಶನಿವಾರ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವೇನು ಭಿಕ್ಷೆ ಕೇಳುತ್ತಿಲ್ಲ. ಏನು ಮಾತುಕೊಟ್ಟಿದ್ದಾರೆ ಎಂಬುದು ಅವರಿಗೆ ನೆನೆಪಿದೆ. ಅದನ್ನು ಉಳಿಸಿಕೊಂಡರೆ ಸಾಕು. ಅವರಿಂದ ನಮಗೆ ಕಳಂಕ ಬಂದಿದೆ. ಸೋತಿರುವ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಿದ್ದಾರೆ" ಎಂದು ಹೇಳಿದರು.
"ಸೋಲು ಹಾಗೂ ನೈತಿಕ ವಿಚಾರಕ್ಕೆ ಹೋಲಿಕೆ ಇದೆ. ಅರುಣ್ ಜೇಟ್ಲಿ ಅವರು ಚುನಾವಣೆಯಲ್ಲಿ ಸೋತಿದ್ದರು ಆದರೂ ಅವರಿಗೆ ಸಚಿವ ಸ್ಥಾನ ನೀಡಿ ಅವರ ಅನುಭವ ಹಾಗೂ ಹಿರಿತನವನನ್ಉ ಆಡಳಿತದಲ್ಲಿ ಬಳಕೆ ಮಾಡಿಕೊಳ್ಳಲಾಯಿತು. ಹಾಗೆಯೇ ನಮ್ಮ ಅನುಭವ ಹಾಗೂ ಹಿರಿತನವನ್ನು ಉಪಯೋಗಿಸಿಕೊಳ್ಳಿ ಎಂದು ಹೇಳುತ್ತಿದ್ದೇವೆ. ಇದರಲ್ಲಿ ತಪ್ಪೇನಿದೆ" ಎಂದು ಕೇಳೀದರು.
"ಚುನಾವಣೆಯಲ್ಲಿ ಸೋತರೂ ಎಂಬ ಕಾರಣದಿಂದ ಯಾರೂ ಅವಕಾಶಗಳಿಂದ ವಂಚಿತರಾಗಬಾರದು. ಬೇರೆಯವರಿಗೆ ದೊರೆತಿರುವ ಅವಕಾಶಗಳನ್ನು ನಮಗೆ ನೀಡಿ ಎಂದು ಕೇಳುತ್ತಿದ್ದೇವೆ. ಈ ವಿಚಾರವಾಗಿ ಶನಿವಾರ ಸಿಎಂ ಬಿಎಸ್ವೈ ಅವರಲ್ಲಿ ಮಾತನಾಡುತ್ತೇನೆ" ಎಂದು ಹೇಳಿದರು.
ಇದ್ಕಕೂ ಮೊದಲು ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್ ಅವರು, "ಯಾರು ಉಪಚುನಾವಣೆಯಲ್ಲಿ ಸೋತಿದ್ದಾರೋ ಅವರಿಗೆ ಸಿಎಂ ಬಿಎಸ್ವೈ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ. ಸೋತರೆ ಮಂತ್ರಿ ಸ್ಥಾನ ದೊರಕುವುದಿಲ್ಲ ಎಂದು ಹೇಳಿದ್ದರು. ಅಲ್ಲದೇ, ಮೇ ತಿಂಗಳಿನಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಬಿಎಸ್ವೈ ಅವರ ಮಾತಿನಂತೆ ಶಂಕರ್ ನಡೆದುಕೊಂಡರು. ಉಳಿದವರು ಸೋತರು. ಈಗ ಸಚಿವ ಸ್ಥಾನ ಕೊಡುವುದು, ಬಿಡುವುದು ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ಬಿಟ್ಟ ನಿರ್ಧಾರ" ಎಂದು ಹೇಳಿದರು.
"ಈ ದಿನದಂದೇ ಸಚಿವ ಸ್ಥಾನ ನೀಡಿ ಎಂದು ಯಾರೂ ಕೇಳುತ್ತಿಲ್ಲ. ತಕ್ಷಣವೇ ನೀಡಿ ಎಂದು ಹೇಳಲೂ ಆಗವುದಿಲ್ಲ. ಚುನಾವಣೆಯ ಸಂದರ್ಭ ಏನು ಹೇಳಿದ್ದೇವೆ, ಈಗ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಸಿಎಂ ಅವರಿಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ" ಎಂದು ಹೇಳಿದರು.