ತಿರುವನಂತಪುರಂ, ಜ.25 (Daijiworld News/PY) : ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಆರೋಪ ಮಾಡಿದ ಸನ್ಯಾಸಿನಿಯರಿಗೆ ಬೆಂಬಲವಾಗಿ ನಿಂತ 5 ಸನ್ಯಾಸಿಗಳಲ್ಲಿ ಒಬ್ಬರಾದ ಸಿಸ್ಟರ್ ಲೂಸಿ ಕಲಾಪುರ ಶನಿವಾರ, ಕಾನ್ವೆಂಟ್ನಲ್ಲಿ ಹಸಿವಿನಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದು, ಅಧಿಕಾರಿಗಳು ಅವರನ್ನು ಬಲವಂತದಿಂದ ಹೊರಹಾಕಿದ್ದಾರೆ ಎನ್ನಲಾಗಿದೆ.
52 ವರ್ಷದ ಸನ್ಯಾಸಿನಿಗೆ ಅಧಿಕಾರಿಗಳು ಆಹಾರ ನಿರಾಕರಿಸಿದ್ದು, ನಾನು ಹಸಿವಿನಂದ ಸಾವನಪ್ಪಿದರೂ ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರೆಗೇಷನ್ನ ಕಾನ್ವೆಂಟ್ನಲ್ಲಿ ಉಳಿಯುವುದಾಗಿ ಹೇಳಿದ್ದಾರೆ ಎಂದು ಚರ್ಚ್ನ ಮೂಲಗಳು ತಿಳಿಸಿವೆ.
ನಾನು ಕಾನ್ವೆಂಟ್ ಅಧಿಕಾರಿಗಳ ವಿರುದ್ದ 3 ದೂರು ದಾಖಲಿಸಿದ್ದೇನೆ. ಆದರೆ ಈ ವಿಚಾರವಾಗಿ ಕ್ರಮಕೈಗೊಳ್ಳಲು ಪೊಲೀಸರು ವಿಫಲರಾಗಿದ್ದಾರೆ. ನನಗೆ ತೊಂದರೆ ಮಾಡಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ ಎಂದು ಸನ್ಯಾಸಿನಿ ಹೇಳಿದ್ದಾರೆ.
ಕಳೆದ ವರ್ಷ ಬಿಷಪ್ ಫ್ರಾಂಕೊ ವಿರುದ್ಧ ಪ್ರತಿಭಟನೆ ನಡೆಸಿದ ಐದು ಸನ್ಯಾಸಿಗಳಲ್ಲಿ ಸಿಸ್ಟರ್ ಲೂಸಿ ಒಬ್ಬರು, ಅತ್ಯಾಚಾರ-ಆರೋಪಿತ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ರಕ್ಷಿಸಲು ಸಾಕ್ಷ್ಯಗಳನ್ನು ಹಾಳುಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು.
ಸಿಸ್ಟರ್ ಲೂಸಿ ಕಲಾಪುರಕ್ಕಲ್ ಕಳೆದ ವರ್ಷ ಸಂತ್ರಸ್ತೆ ಸನ್ಯಾಸಿಗಳನ್ನು ಬೆಂಬಲಿಸಿದ್ದರು ಮತ್ತು ಜಲಂಧರ್ನಲ್ಲಿ ರೋಮನ್ ಕ್ಯಾಥೊಲಿಕ್ ಡಯೋಸಿಸ್ ಮುಖ್ಯಸ್ಥರಾಗಿದ್ದ ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ತನ್ನ ಆತ್ಮಚರಿತ್ರೆ ಬಿಡುಗಡೆಯಾದ ನಂತರ ತನ್ನ ವಿರುದ್ಧದ ಕಿರುಕುಳ ಹೆಚ್ಚಾಗಿದೆ. ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿ ವ್ಯಾಟಿಕನ್ಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದೇನೆ ಮತ್ತು ಕ್ಯಾಥೊಲಿಕ್ ಚರ್ಚ್ನ ಸರ್ವೋಚ್ಚ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರಿಂದ ಅನುಕೂಲಕರ ಉತ್ತರವನ್ನು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.
ಪೊಲೀಸರು ಕ್ರಮಕೈಗೊಂಡರೆ, ಹಿಂಸೆ ನೀಡುವವರು ಕಡಿಮೆಯಾಗುತ್ತಾರೆ. ಆದರೆ ಯಾವುದೇ ಕ್ರಮಕೈಗೊಳ್ಳದೇ ಇದಲ್ಲಿ ಕಿರುಕುಳ ನೀಡುವವರು ಜಾಸ್ತಿಯಾಗುತ್ತಾರೆ. ಇವೆಲ್ಲದರ ಹೊರತಾಗಿಯೂ, ನಾನು ಕಾನ್ವೆಂಟ್ ಅನ್ನು ಬಿಡುವುದಿಲ್ಲ, ನಾನು ನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದ್ದಾರೆ.
2014 ರ ಪ್ರಮುಖ ವಿಷಯವನ್ನು ಚರ್ಚಿಸುವ ನೆಪದಲ್ಲಿ ಮುಲ್ಲಕ್ಕಲ್ ತನ್ನನ್ನು ಕರೆಸಿದ ನಂತರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಎರಡು ವರ್ಷಗಳ ಕಾಲ ಹಲ್ಲೆ ಮುಂದುವರೆಸಿದ್ದಾರೆ ಎಂದು ಆರೋಪಿಸಿ 43 ವರ್ಷದ ಸನ್ಯಾಸಿನಿಯೊಬ್ಬರು 2018ರ ಜೂನ್ನಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ನಂತರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಹಲವಾರು ಸುತ್ತಿನ ವಿಚಾರಣೆಯ ನಂತರ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮುಲ್ಲಕಲ್ ಅವರನ್ನು ಬಂಧಿಸಿತು.