ನವದೆಹಲಿ, ಜ 26 (Dajiworld News/MB) : ಇಂದು ಭಾರತದಾದ್ಯಂತ 71ನೇ ಗಣರಾಜ್ಯೋತ್ಸವದ ಸಂಭ್ರಮವಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಣರಾಜೋತ್ಸವದ ಶುಭಾಶಯವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಂದು ರಾಜ್ಪಥ್ ನಲ್ಲಿ ನಡೆಯುವ ಪರೇಡ್ ಇಂದಿನ ಪ್ರಮುಖ ಆಕರ್ಷಣೆಯಾಗಿದ್ದು ಬೆಳಗ್ಗೆ 9 ರಿಂದ 11:30 ರವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಿಗಿ ಭದ್ರತೆ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಅವರು ಆಗಮಿಸಿದ್ದಾರೆ. ಪೊಲೀಸರು ಮತ್ತು ಅರೆಸೇನಾ ಪಡೆ ಯೋಧರು ಸೇರಿದಂತೆ ಸುಮಾರು 10 ಸಾವಿರ ಸಿಬ್ಬಂದಿಗಳು ಬಂದೋಬಸ್ತ್ ಮಾಡಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ 16 ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಆರು ಸಚಿವಾಲಯಗಳು ಮತ್ತು ಇಲಾಖೆಗಳು ರೂಪಿಸಿರುವ ಸ್ತಬ್ಧ ಚಿತ್ರಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಮೂಲಕ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳ್ಳಲಿದೆ. ಇದೇ ವೇಳೆ ಕರ್ನಾಟಕದ 7 ವಿದ್ಯಾರ್ಥಿಗಳು ಸೇರಿದಂತೆ ಸಿಬಿಎಸ್ಇ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಅಗ್ರ ಶ್ರೇಯಾಂಕ ಪಡೆದ ದೇಶದ ವಿವಿಧ ರಾಜ್ಯಗಳ 105 ಮಂದಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕುಳಿತು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲಿದ್ದಾರೆ.