ಮಂಗಳೂರು, ಜ 26 (Dajiworld News/MB) : "ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿಯ ಗುಟ್ಟು ಬಯಲು ಮಾಡಲು ಹೋರಾಟ ನಡೆಸುತ್ತಿರುವ ಹಿನ್ನಲೆಯಲ್ಲಿ ನನ್ನ ಹತ್ಯೆಗೆ ಆರ್ಎಸ್ಎಸ್ ಸಂಚು ಮಾಡಿದೆ. ಮಹಾತ್ಮಗಾಂಧಿಯನ್ನೇ ಹತ್ಯೆ ಮಾಡಿದವರು ಅವರು. ಅವರಿಗೆ ನಾನು ಯಾವ ಲೆಕ್ಕ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ನನ್ನನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದವರ ಹಿಂದೆ ಯಾರು ಇದ್ದಾರೆ ಎಂಬುದು ನನಗೆ ತಿಳಿದಿದೆ. ಮತ್ತೊಂದು ಸಮಾಜದ ಭಯೋತ್ಪಾದಕರ ಕುರಿತು ಮಾತನಾಡುವ ಬಿಜೆಪಿಯ ಅಂಗ ಸಂಸ್ಥೆಗಳಲ್ಲೇ ಭಯೋತ್ಪಾದಕರು ಇದ್ದಾರೆ" ಎಂದರು.
"ನಾನು ಮಾಜಿ ಮುಖ್ಯಮಂತ್ರಿ ಎಂಬ ಹಿನ್ನಲೆಯಲ್ಲಿ ನನಗೆ ಸರ್ಕಾರ ಭದ್ರತೆ ಒದಗಿಸಿದೆ. ಆದರೆ ನಾನು ಅದನ್ನು ಲೆಕ್ಕಿಸದೇ ನೇರವಾಗಿ ಜನರ ಬಳಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ನನ್ನ ಮೇಲೆ ಸಣ್ಣ ದಬ್ಬಾಳಿಕೆ, ದೌರ್ಜನ್ಯ ನಡೆಸಿದರೆ ಅಂತಹವರು ಸುಟ್ಟು ಭಸ್ಮವಾಗುತ್ತಾರೆ, ಬೆಂಕಿ ಬಿದ್ದುಬಿಡುತ್ತದೆ"ಎಂದು ಕಿಡಿಕಾರಿದರು.
"ಆರ್ಎಸ್ಎಸ್ ಹುಟ್ಟಿದ್ದು ಜರ್ಮನಿಯಲ್ಲಿ ಹಿಟ್ಲರ್ನ ನಾಜಿಪಂಥ ಹುಟ್ಟಿಕೊಂಡಾಗಲೇ. ನಾಜಿ ಸಂಘಟನೆಗೂ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಆರ್ಎಸ್ಎಸ್ಗೂ ವ್ಯತ್ಯಾಸವಿಲ್ಲ" ಎಂದು ಟೀಕೆ ಮಾಡಿದರು.
"ಕೆಲವರು ನಾನು ಮಂಗಳೂರಿನ ಘಟನೆಗಳ ಬಗ್ಗೆ ಮಾತನಾಡಿದ್ದೇನೆ ಎಂದು ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಹೇಳಿದ್ದಾರೆ. ಪಾಕಿಸ್ತಾನದ ಭಜನೆ ಮಾಡುತ್ತಿರುವವರು ಬಿಜೆಪಿಯವರೇ ವಿನಃ ನಾವಲ್ಲ. ನಿಮ್ಮ ಜೀನ್ ಗಳು ಪಾಕಿಸ್ತಾನದಲ್ಲಿರಬಹುದು ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ನನ್ನ ಜೀನ್ ಈ ಮಣ್ಣಿನಲ್ಲಿದೆ" ಎಂದು ಆಕ್ರೋಶಗೊಂಡರು.
"ಸಮಾಜದ ಶಾಂತಿಗಾಗಿ ಹೋರಾಡಿದ್ದಕ್ಕೆ ನನ್ನನ್ನು ಕೊಲ್ಲುವ ಸಂಚು ನಡೆಯುತ್ತಿದೆಯಂತೆ. ನನ್ನನ್ನು ಕೊಲ್ಲಿಸುವ ಕೆಲಸಕ್ಕೆ ಕೈಹಾಕಿದವರೇ ಒಂದು ವಿಚಾರ ತಿಳಿದುಕೊಳ್ಳಿ. ನನ್ನಂತೆ ಹೋರಾಡಬಲ್ಲ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಪಡೆ ನನ್ನ ಬೆನ್ನಿಗಿದೆ. ನನ್ನನ್ನು ಕೊಲ್ಲಬಹುದು. ಆದರೆ ನನ್ನ ಬೆನ್ನಿಗೆ ನಿಂತವರನ್ನು ಕೊಲ್ಲಲಾದೀತೆ?" ಎಂದು ಅವರು ಟ್ವೀಟ್ ಮಾಡಿದ್ದರು.
ಈ ಕುರಿತು ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, "ಎಚ್.ಡಿ.ಕುಮಾರಸ್ವಾಮಿ ಅವರು ಜೀವ ಬೆದರಿಕೆ ಇರುವ ಸಂಬಂಧ ವಿವರ ನೀಡಿದರೆ ತನಿಖೆ ನಡೆಸಲಾಗುವುದು. ಅವರ ರಕ್ಷಣೆ ನಮ್ಮ ಆದ್ಯತೆ. ಅವರಿಗೆ ಹೆಚ್ಚಿನ ರಕ್ಷಣೆ ನೀಡುತ್ತೇವೆ. ಸುಖಾಸುಮ್ಮನೆ ಅವರು ಆರೋಪ ಮಾಡುವುದು ಸರಿಯಲ್ಲ. ಗೃಹ ಸಚಿವನಾಗಿ ಸರಿಯಾಗಿಯೇ ಕೆಲಸ ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಾವ ಮಟ್ಟದ ಭದ್ರತೆ ಒದಗಿಸಲಾಗಿತ್ತೊ ಅಷ್ಟೇ ಭದ್ರತೆಯನ್ನು ಕುಮಾರಸ್ವಾಮಿಯವರಿಗೂ ನೀಡಲಾಗಿದೆ ಎಂದು ತಿಳಿಸಿದ್ದಾರೆ.