ಬೆಂಗಳೂರು, ಜ 26 (Dajiworld News/MB) : ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರು. ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿದ ರಾಜ್ಯಪಾಲರು ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ದೇಶದಾದ್ಯಂತ ಮೂಲಭೂತ ಕರ್ತವ್ಯಗಳ ಕುರಿತು ಆಂದೋಲನಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ನಾಗರಿಕರಾಗಿ ನಮ್ಮ ಕರ್ತವ್ಯಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ನಮ್ಮ ಬದ್ಧತೆಯನ್ನು ಪುನರ್ ನವೀಕರಣ ಮಾಡಬೇಕಾದ ಸಂದರ್ಭವಿದು. ಪುರುಷರು ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳಲು ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಳೆದ ಆಗಸ್ಟ್ನಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ನಂತರ, 7 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಸಂಕಷ್ಟಕ್ಕೊಳಗಾದ 2.07 ಲಕ್ಷ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ ಎಂದರು.
ಈ ಸಮಾರಂಭದಲ್ಲಿ ಕೆಎಸ್ಆರ್ಪಿ, ಸ್ಕೌಟ್ಸ್-ಗೈಡ್ಸ್, ಎನ್ಸಿಸಿ, ಸೇವಾದಳ, ವಿವಿಧ ಶಾಲಾ ಮಕ್ಕಳನ್ನು ಸೇರಿ 1,750 ಮಂದಿ ಪಥಸಂಚಲನದಲ್ಲಿ ಭಾಗಿಯಾದರು. ಕಿಕ್ಕೇರಿ ಕೃಷ್ಣಮೂರ್ತಿ ದೊಡ್ಡವಾಡ ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು.