ಬೆಳಗಾವಿ, ಜ.26 (Daijiworld News/PY) : "ಪೌರತ್ವ ಕಾಯ್ದೆ ಜಾರಿಯಿಂದ ಗಣರಾಜ್ಯೋತ್ಸವ ಮತ್ತಷ್ಟು ಅರ್ಥಪೂರ್ಣವಾಗುತ್ತದೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಯು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದೆ. ಇದು ಪೌರತ್ವವನ್ನು ನೀಡುವ ಕಾಯ್ದೆ. ಈ ಕಾಯ್ದೆಯು ಯಾರ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಎಲ್ಲಾ ಭಾರತೀಯರು ಪೌರತ್ವ ಕಾಯ್ದೆಗೆ ಬೆಂಬಲ ಕೊಡಬೇಕು" ಎಂದು ಹೇಳಿದರು.
"ಪೌರತ್ವ ಕಾಯ್ದೆಯ ಅನುಷ್ಠಾನದಿಂದ ಗಣರಾಜ್ಯೋತ್ಸವ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ವಿನಾಕಾರಣ ಗಡಿ ವಿಚಾರವನ್ನು ಕೆಣುಕುವ ಪ್ರಯತ್ನ ನಡೆದಿದೆ. ಜನರು ಯಾವುದೇ ಪ್ರಚೋದನೆಗಳಿಗೆ ಒಳಗಾಗಬಾರದು ಎಲ್ಲರೂ ಸೌಹಾರ್ದತೆಯಿಂದಿರಬೇಕು. ಗಡಿ ವಿವಾದ ವಿಚಾರವು ಅಂತ್ಯಗೊಂಡ ಅಧ್ಯಾಯ. ಈಗಾಗಲೇ ಬೆಳಗಾವಿ ನಮ್ಮದು. ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹಲವು ಬಾರಿ ಹೇಳಿದ್ದೇವೆ. ಮತ್ತೊಮ್ಮೆ ಈ ವಿಚಾರವಾಗಿ ಕೆಣಕುವ ಪ್ರಯತ್ನ ಮಾಡಬಾರದು" ಎಂದು ಹೇಳಿದರು.