ತುಮಕೂರು, ಜ.26 (Daijiworld News/PY) : "ಪಕ್ಷವು ಸಚಿವ ಸ್ಥಾನವನ್ನು ಕೇಳಿದರೆ ಖುಷಿಯಿಂದ ಬಿಟ್ಟುಕೊಡುತ್ತೇನೆ. ರಾಜ್ಯಕ್ಕೆ ಉತ್ತಮ ಸರ್ಕಾರವಿರಲಿ" ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕಗ್ಗಂಟ್ಟಾಗಿರುವ ವಿಚಾರ ಹೊಸಬರಿಗೆ ಸ್ಥಾನ ನೀಡಬೇಕು ಎಂದರೇ, ಹಿರಿಯ ನಾಯಕರು ಪದತ್ಯಾಗ ಮಾಡಬೇಕಾಗಿರುವುದು ಅನಿವಾರ್ಯ ಎಂಬ ಮಾತು ಪಕ್ಷದಲ್ಲಿ ಕೇಳಿ ಬಂದಿದ್ದು, ಸರ್ಕಾರ ರಚನೆಗೆ ಸಹಾಯ ಮಾಡಿದ ಶಾಸಕರಿಗೆ ಸ್ಥಾನ ನೀಡಬೇಕು ಎಂದರೇ ಈ ಸೂತ್ರ ಅಳವಡಿಕೆ ಉತ್ತಮ ಎನ್ನುವುದಾಗಿ ಕೆಲ ನಾಯಕರ ಮಾತಾಗಿದೆ. ಇದೇ ಮಾತಿನಿಂದ ಹಲವು ಹಿರಿಯ ನಾಯಕರ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ತುಮಕೂರಿನಲ್ಲಿ ಮಾತನಾಡಿದ ಮಾಧುಸ್ವಾಮಿ ಅವರು, "ಪಕ್ಷ ಸಚಿವ ಸ್ಥಾನವನ್ನು ಕೇಳಿದರೆ ಬಿಟ್ಟುಕೊಡಲು ನಾನು ಸಿದ್ದ. ರಾಜ್ಯಕ್ಕೆ ಉತ್ತಮ ಸರ್ಕಾರವಿರಲಿ" ಎಂದರು.
ವಿಜಯಪುರದಲ್ಲಿ ಮಾತನಾಡಿದ ಬಸವನಗೌಡ ಪಾಟೀಲ ಯತ್ನಾಳ್ ಅವರು, "ನೂತನ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಈ ಮಾತನ್ನು ಸಿಎಂ ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಹೀಗಾಗಿ ಪಕ್ಷದಲ್ಲಿ ಈಗಾಗಲೇ ಲಾಭ ಪಡೆದವರು ಪದತ್ಯಾಗಕ್ಕೆ ಮುಂದಾಗಬೇಕು" ಎಂದು ಹೇಳಿದರು.