ವಿಜಯಪುರ, ಜ.26 (Daijiworld News/PY) : "ಕೆಪಿಸಿಸಿ ಅಧ್ಯಕ್ಷರ ನೇಮಕದ ವೇಳೆ ಉತ್ತರ ಕರ್ನಾಟಕಕ್ಕೆ ಆದತ್ಯೆ ನೀಡಿ ಎಂದು ಹೇಳುತ್ತೇನೆಯೇ ಹೊರತು ನನ್ನನ್ನು ನೇಮಿಸಿ ಎಂದು ಹೇಳುವುದಿಲ್ಲ. ಈ ವಿಚಾರ ಸದ್ಯ ಹೈಕಮಾಂಡ್ ಕೈಯಲ್ಲಿದೆ" ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹೈಕಮಾಂಡ್ನ ಗಮನಕ್ಕೆ ತಂದಿದ್ದೇನೆ. ಕಾರ್ಯಾಧ್ಯಕ್ಷರ ಸಂಖ್ಯೆ ಅಧಿಕಗೊಳಿಸುವುದು ಎಂಬುದು ಸಿದ್ದರಾಮಯ್ಯ ಅವರ ನಿಲುವು ಅಲ್ಲ. ಇದು ಮಾಧ್ಯಮಗಳ ಸೃಷ್ಟಿ" ಎಂದರು.
"ಪ್ರತಿಪಕ್ಷದ ಸ್ಥಾನದಲ್ಲಿ ದಕ್ಷಿಣ ಕರ್ನಾಟಕದವರು ಇದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕು ಎಂಬುದು ಎಲ್ಲರ ಆಶಯ. ಯಾವ ಜಾತಿ, ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಉತ್ತರ ಕರ್ನಾಟಕಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ನಿಟ್ಟಿನಲ್ಲಿ ವಿವಿಧ ಸಮೀಕರಣ ನಡೆಸಿ ಸಿದ್ಧರಾಮಯ್ಯ ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ನಾನು ಶಕ್ತನಾಗಿದ್ದೇನೆ. ಪ್ರತಿಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿಯಲ್ಲ. ಸಿದ್ಧರಾಮಯ್ಯ ಅವರೇ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಅರ್ಹ ಎಂಬುದು ಎಲ್ಲರ ಆಶಯ.ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಪ್ರಯತ್ನಿಸಿಲ್ಲ. ತಾನಾಗಿಯೇ ಉರುಳಿದರೆ ಏನೂ ಮಾಡಲು ಆಗುವುದಿಲ್ಲ" ಎಂದು ತಿಳಿಸಿದರು.