ಬೆಂಗಳೂರು, ಜ 26 (Dajiworld News/MB) : ಪೊಲೀಸ್ ಮಾಹಿತಿದಾರನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಸವೇಶ್ವರ ನಗರ ಬಳಿಯ ಕಮಲಾನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಪ್ರಭು ಅಲಿಯಾಸ್ ಅಪ್ಪು (27) ಎಂದು ಗುರುತಿಸಲಾಗಿದ್ದು ಅವರು ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಚೆಕ್ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು.
ಪ್ರಭು ಪೊಲೀಸರಿಗೆ ಕಳ್ಳರ ಬಗ್ಗೆ ಮಾಹಿತಿ ನೀಡುತ್ತಿದ್ದು ಎರಡು ಬಾರಿ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟಿದ್ದರು. ಈ ಕಾರಣದಿಂದಲ್ಲೇ ಹಳೇ ದ್ವೇಷದಿಂದಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪ್ರಭು ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದು ಪ್ರಭು ಅವರಿಗೆ ಹಲವು ಬಾರಿ ಇರಿದಿದ್ದಾರೆ. ತೀವ್ರ ರಕ್ತಸ್ರಾವ ಆದ ಪರಿಣಾಮದಿಂದಾಗಿ ಪ್ರಭು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.