ಬೆಂಗಳೂರು, ಜ.26 (Daijiworld News/PY) : "ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಮೇಲೆ ಆಕ್ರಮಣ ಎಸಗುತ್ತಲೇ ಇದೆ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ 71ನೇ ಗಣ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಮೇಲೆ ಆಕ್ರಮಣ ಎಸಗುತ್ತಲೇ ಇದೆ. ಆರ್.ಬಿ.ಐ, ಚುನಾವಣಾ ಆಯೋಗ, ಮಾಹಿತಿ ಹಕ್ಕು ಆಯೋಗದಂತಹ ಸಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಕಳೆದುಕೊಳ್ಳುತ್ತಿವೆ. ಈ ಸಂಬಂಧ ದೇಶದ ಜನರನ್ನು ದಾರಿ ತಪ್ಪಿಸಲಾಗುತ್ತಿದ್ದು ಇಂತಹ ಅಪಾಯಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು" ಎಂದರು.
"ದೇಶದಲ್ಲಿ ಪ್ರತಿ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಬದುಕುವ ಸಮಾನ ಅವಕಾಶ ಕಲ್ಪಿಸಿದ್ದು ನಮ್ಮ ಘನ ಸಂವಿಧಾನ. ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ರಾಷ್ಟ್ರವನ್ನು ಕಟ್ಟಲಾಗಿದೆ. ಸಂವಿಧಾನದ ಕಾರಣಕ್ಕಾಗಿಯೇ ಭಾರತವನ್ನು ಇಡೀ ಜಗತ್ತು ಗೌರವದಿಂದ ಕಾಣುವಂತಹ ವಾತಾವರಣ ನಿರ್ಮಾಣವಾಗಿದೆ" ಎಂದು ಹೇಳಿದರು.
"ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ಇಂದು ದಿಕ್ಕು ತಪ್ಪಿಸುವಂತ ಕೆಲಸ ಕಾರ್ಯಗಳು ಆಗುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಕೂಡಾ ಬಹಳ ಗಮನ ಹರಿಸಬೇಕಾಗುತ್ತದೆ. ಚಿಂತನೆ ಮಾಡಬೇಕಾಗುತ್ತದೆ. ಹೋರಾಟದ ದಾರಿಯನ್ನು ಹಿಡಿಯಬೇಕಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಯಾವ ಆಶೋತ್ತರಗಳು ಇದ್ದವೋ, ಯಾವ ಆಶಯಗಳು ಇಟ್ಟುಕೊಂಡು ಈ ಭಾರತ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಸಂವಿಧಾನವನ್ನು ಬರೆದಿದ್ದಾರೆಯೋ ಅದರ ತದ್ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ" ಎಂದರು.