ನವದೆಹಲಿ, ಜ.26 (Daijiworld News/PY) : "ಬಿಜೆಪಿಗೆ ಬಟನ್ ಒತ್ತುವ ಮೂಲಕ ದೆಹಲಿ ಮತದಾರರು ಮತ ಚಲಾಯಿಸಿ. ಆ ಮೂಲಕ ಪೌರತ್ವ ಕಾಯ್ದೆ ವಿರೋಧಿಗಳು ತಾವಾಗಿಯೇ ಸ್ಥಳದಿಂದ ಹೊರಹೋಗು ಆ ರೀತಿ ಮತ ಚಲಾಯಿಸಿ" ಎಂದು ಗೃಹ ಮಂತ್ರಿ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ರೋಡ್ ಶೋ ಸಂದರ್ಭದಲ್ಲಿ ಮಾತನಾಡಿದ ಅವರು, "ದೆಹಲಿಗೆ ಶುದ್ಧ ಗಾಳಿ, ಪರಿಶುದ್ಧ ವಾತಾವರಣ, ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು, ಅನಿಯಂತ್ರಿತ ವಿದ್ಯುತ್, ಮಕ್ಕಳಿಗೆ ಉತ್ತಮ ಶಿಕ್ಷಣ, ವಿಶ್ವದರ್ಜೆಯ ರಸ್ತೆಗಳು, ಟ್ರಾಫಿಕ್ ಜಾಮ್ ಇಲ್ಲದಂತ ರಸ್ತೆಗಳ ಅವಶ್ಯಕತೆ ಇದೆ ಇವೆಲ್ಲವೂ ಬೇಕೆಂದರೆ, ಬಿಜೆಪಿಗೆ ಮತ ನೀಡಿ" ಎಂದು ಹೇಳಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ನಡೆಯುತ್ತಿದ್ದು, ಹಲವು ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ, ಭಾನುವಾರ ಗಣರಾಜ್ಯೋತ್ಸವ ದಿನಾಚರಣೆಯಾದರೂ ಸಹ ಗೃಹಮಂತ್ರಿ ಅಮಿತ್ ಶಾ ದೆಹಲಿಯಲ್ಲಿ ಬಹಿರಂಗ ಪ್ರಚಾರ ಮುಂದುವರೆಸಿದ್ದಾರೆ. ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅಮಿತ್ ಶಾ ಅವರ ಜೊತೆಗಿದ್ದರು.
ಭಾನುವಾರ ದೆಹಲಿಯ ಗೊಂಡಾ ವಿಧಾನ ಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿ ಅಜಯ್ ಮಹಾವತ್ ಪರ ಅಮಿತ್ ಶಾ ಪ್ರಚಾರ ನಡೆಸಿದರು. ಫೆ.8ರಂದು ಈ ಮತದಾನ ನಡೆಯಲಿದ್ದು, ಫೆ.11ರಂದು ಮತ ಎಣಿಕೆ ನಡೆಯಲಿದೆ.