ವಿಜಯಪುರ, ಜ 26 (Dajiworld News/MB) : ಮಿಣಿಮಿಣಿ ಪೌಡರ್ ಯಾವುದೋ? ಅದು ಹೊಸ ಸಂಶೋಧನೆಯೋ ನನಗೆ ಅರ್ಥವಾಗುತ್ತಿಲ್ಲ. ಆದರೆ ಪಾಂಡ್ಸ್ ಪೌಡರನ್ನೇ ಸೈಡು ಹೊಡೆದಿದೆ ಈ ಮಿಣಿಮಿಣಿ ಪೌಡರ್ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಮಾರಸ್ವಾಮಿಯವರನ್ನು ವ್ಯಂಗ್ಯ ಮಾಡಿದ್ದಾರೆ.
ಈಗ ಎಲ್ಲರ ಬಾಯಲ್ಲೂ ಮಿಣಿಮಿಣಿ ಪೌಡರ್ ವಿಷಯವೇ ಇದೆ. ಟಿಕ್ ಟಾಕ್ ನಲ್ಲೂ, ಎಲ್ಲೆಲ್ಲೂ ಮಿಣಿಮಿಣಿ ಪೌಡರ್. ಕುಮಾರ ಸ್ವಾಮಿಯವರು ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿದೇಶ ಪ್ರವಾಸದಿಂದ ವಾಪಸ್ ಬಂದ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಿ ಬಂದಿದ್ದು ಇನ್ನು 15 ದಿನದಲ್ಲಿ ಸಿಎಂ ವಿಜಯಪುರಕ್ಕೆ ಬರಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗಲೇಬೇಕು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಸಿ.ಸಿ. ಪಾಟೀಲ್ ಅವರನ್ನು ಬಲಿಕೊಟ್ಟು ನಾನು ಸಚಿವನಾಗಲು ಬಯಸುವುದಿಲ್ಲ. ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 17 ಜನರಲ್ಲಿ ಕೆಲವರಿಗೆ ಡಿಸಿಎಂ, ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಮಾನ ನೀಡಲು ಮಾತುಕತೆಯಾಗಿದೆ. ಆ ರೀತಿ ಆಗುವ ವಿಶ್ವಾಸವಿದೆ ಎಂದರು.
ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ನೀಡಬೇಕೆಂಬುದು ಸಹಜ ಬಯಕೆಯಾಗಿದೆ. ಕೆಲವರು ಬಹಳ ಲಾಭ ಅನುಭವಿಸಿದ್ದಾರೆ. ಈ ರೀತಿ ಲಾಭ ಅನುಭವಿಸಿದವರು ಅವರು ತ್ಯಾಗ ಮಾಡಬೇಕು. ಕೇವಲ ಭಾಷಣ ಮಾಡಬಾರದು. ರಾಜ್ಯದಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿದರು ತಮ್ಮ ಸಚಿವ ಸ್ಥಾನ ಬಿಟ್ಟು ಕೊಡಬೇಕು ಎಂದು ಹೇಳಿದರು.
ನನಗೆ ಸಚಿವ ಸ್ಥಾನ ನೀಡಿದರೆ ಕ್ಯಾಬಿನೆಟ್ ಸ್ಥಾನವನ್ನೇ ನೀಡಬೇಕು. ಸಣ್ಣಪುಟ್ಟ ಸ್ಥಾನಮಾನ ಒಪ್ಪಿಗೆ ನೀಡಲ್ಲ. ನೀಡದಿದ್ದರೆ ಶಾಸಕನಾಗಿ ಮುಂದುವರಿಯುತ್ತೇನೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ನನಗೆ ಸ್ಥಾನ ಕೊಡುವುದಾದರೆ ಸಂಪುಟದಲ್ಲೇ ಸ್ಥಾನ ಕೊಡಬೇಕು. ವಿಜಯಪುರ ಜಿಲ್ಲಾ ಉಸ್ತುವಾರಿ ನೀಡಬೇಕು. ನನಗೆ ಸಚಿವ ನೀಡುವ ವಿಚಾರ ಮುನ್ನೆಲೆಗೆ ಬಂದಲ್ಲಿ ಎರಡು ನಿಯೋಗ ಹೋಗುತ್ತದೆ. ಯತ್ನಾಳ್ಗೆ ಸಚಿವ ಸ್ಥಾನ ನೀಡಬೇಡಿ ಎಂದು ದೆಹಲಿ ಹಾಗೂ ಬೆಂಗಳೂರಿಗೆ ಎರಡು ನಿಯೋಗ ಹೋಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಸ್ಥಾನಗಳ ಸಂಖ್ಯೆ ಹೆಚ್ಚಿಸಿದ ಪರಿಣಾಮ ಆ ಸ್ಥಾನದ ಗೌರವ ಕಡಿಮೆಯಾಗಲಿದೆ. ವೈಯಕ್ತಿಕವಾಗಿ ನನಗೆ ಅದು ಸರಿ ಎಂದು ತೋರುವುದಿಲ್ಲ ಎಂದು ಡಿಸಿಎಂ ಸ್ಥಾನ ಹೆಚ್ಳದ ಬಗ್ಗೆ ಅಸಮ್ಮತಿ ಸೂಚಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಹೈಕಮಾಂಡ್ ಮತ್ತು ಸಚಿವರು , ಸಚಿವರ ಮೌಲ್ಯಮಾಪನ ಮಾಡಬೇಕು. ಸಚಿವರಿಗೆ ನೀಡಿರುವ ಗುರಿಯ ಅವಲೋಕನ ಮಾಡಬೇಕು. ಇಲ್ಲದಿದ್ದಲ್ಲಿ ಕೇವಲ ಗೂಟದ ಕಾರು, ಗನ್ ಮ್ಯಾನ್ ಇಟ್ಟುಕೊಂಡಂತಾಗುತ್ತದೆ. ಕೆಲವು ಸಚಿವರು ವಿಧಾನಸೌಧಕ್ಕೆ ಸೀಮಿತವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.