ಬೆಂಗಳೂರು, ಜ.26 (Daijiworld News/PY): "ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 14 ಗಣ್ಯರಿಗೆ ಕೊಲೆ ಬೆದರಿಕೆಯೊಡ್ಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ" ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿದ ಸಿದ್ದರಾಮಯ್ಯ ಅವರು, "ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 14 ಗಣ್ಯರಿಗೆ ಕೊಲೆ ಬೆದರಿಕೆ ಪತ್ರ ಬರೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಭಯದ ವಾತಾವರಣ ಸೃಷ್ಟಿಸಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಯಾವುದೇ ಶಕ್ತಿಗಳಾದರೂ ಸರಿ ಅಂಥವರಿಗೆ ತಕ್ಕ ಶಿಕ್ಷೆಯಾಗಲೇಬೇಕು" ಎಂದು ತಿಳಿಸಿದ್ದಾರೆ.
ಇದೇ ತಿಂಗಳ 29ರಂದು ಬೆಳಗಾವಿ ಜಿಲ್ಲೆಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರನ್ನು ‘ಸಂಹಾರ’ ಮಾಡುವುದಾಗಿ ಬೆದರಿಕೆ ಪತ್ರವೊಂದು ಇತ್ತೀಚೆಗೆ ನಿಜಗುಣಾನಂದ ಸ್ವಾಮೀಜಿ ಅವರ ಮಠಕ್ಕೆ ಬಂದಿತ್ತು. ಬಜರಂಗದಳದ ಮಾಜಿ ನಾಯಕ ಮಹೇಂದ್ರಕುಮಾರ್, ನಿಡುಮಾಮಿಡಿ ವೀರಭದ್ರ ಸ್ವಾಮೀಜಿ, ಚಿತ್ರನಟ ಪ್ರಕಾಶ್ ರಾಜ್, ಚೇತನಕುಮಾರ್, ಬಿ.ಟಿ. ಲಲಿತಾ ನಾಯಕ, ಮಹೇಶ್ಚಂದ್ರ ಗುರು, ಭಗವಾನ್, ದಿನೇಶ ಅಮಿನ್ ಮಟ್ಟು, ರೌಡಿ ಅಗ್ನಿ ಶ್ರೀಧರ್, ಬೃಂದಾ ಕಾರಟ್ ಅವರನ್ನೂ ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಪತ್ರದಲ್ಲಿ ಬರೆದಿತ್ತು.