ಬೆಂಗಳೂರು, ಜ.26 (Daijiworld News/PY) : "ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪೌರತ್ವ ಕಾಯ್ದೆಯ ಬಗ್ಗೆ ತನ್ನ ನಿರ್ಧಾರವನ್ನು ಪುನಃ ಪರಶೀಲಿಸಬೇಕು, ನಾವು ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಬಿಡುವುದಿಲ್ಲ" ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಭಾನುವಾರ ನಗರದ ಜೆಡಿಎಸ್ ಕಚೇರಿ ಜೆಪಿ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತಾಡಿದ ಅವರು, "ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ಜೆಡಿಎಸ್ ಹೋರಾಟ ಮುಂದುವರೆಯುತ್ತದೆ.ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ತಮ್ಮ ರಾಜ್ಯಗಳಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ ಎಂದು ತೀರ್ಮಾನಿಸಿದ್ದೇವೆ. ಮಹಾತ್ಮ ಗಾಂಧೀಜಿಯವರ ಮಾರ್ಗದಲ್ಲಿ ನಾವು ಕೂಡ ಶಾಂತಿಯುತ ಹೋರಾಟ ಮಾಡಲಿದ್ದೇವೆ" ಎಂದು ಹೇಳಿದರು.
"ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬೇಡಿ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಈ ಕಾಯ್ದೆ ಜಾರಿಯಾಗದಂತೆ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ತೀರ್ಮಾನವನ್ನು ಬದಲಿಸುತ್ತಿಲ್ಲ. ಪ್ರಧಾನಿ ಮೋದಿ ಸರ್ಕಾರದ ಕೆಲವು ನಿರ್ಧಾರಗಳು ದೇಶದ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತಿವೆ" ಎಂದರು.
"ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದೆ. ಈ ಉದ್ದೇಶವನ್ನು ಈಡೇರಿಸಲು ನಾವು ಬಿಡಲ್ಲ. ಇದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲಾ ಧರ್ಮಗಳಿಗೂ ಸಮಾನವಾದ ಅವಕಾಶ ಇದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹಿಂದೂ ರಾಷ್ಟ್ರಮಾಡುವ ಉದ್ದೇಶ ಸಫಲವಾಗುವುದಿಲ್ಲ" ಎಂದು ತಿಳಿಸಿದರು.
"ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಅಂಬೇಡ್ಕರ್ ಅವರು ಕಾನೂನು ಬರೆದು ಎಲ್ಲಾ ಧರ್ಮಗಳಿಗೆ ರಕ್ಷಣೆ ನೀಡಬೇಕೆಂದಿದ್ದರು. ಆದರೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ 5 ಧರ್ಮೀಯರನ್ನು ಸೇರಿಸಿ ಕೇವಲ ಮುಸ್ಲಿಮರನ್ನು ಹೊರಹಾಕಿದೆ. ಬಿಜೆಪಿಯವರು ಈ ಕಾಯ್ದೆಯನ್ನು ರಾಜಕೀಯ ಉದ್ದೇಶದಿಂದ ಮಾಡಿರುವುದು. ಜಾತ್ಯಾತೀತತೆಯ ವಿಚಾರದಲ್ಲಿ ಬಿಜೆಪಿ ಬಗ್ಗೆ ಯಾವುದೇ ಭರವಸೆ ಇಡಬೇಡಿ" ಎಂದು ಹೇಳಿದರು.