ಬೆಂಗಳೂರು , ಜ.26 (Daijiworld News/PY) : "ನಗರದ ಆನಂದ್ರಾವ್ ವೃತ್ತದ ಮೇಲ್ಸೇತುವೆಗೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭಾನುವಾರ ಸಂಗೋಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯ ಅಂಗವಾಗಿ ಮೆಜೆಸ್ಟಿಕ್ ಸಮೀಪವಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, "ಸಂಗೊಳ್ಳಿ ರಾಯಣ್ಣ ಅವರನ್ನು ಸದಾ ಸ್ಮರಿಸುವ ದೃಷ್ಟಿಯಿಂದ ಬಿಬಿಎಂಪಿ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಆನಂದ್ರಾವ್ ವೃತ್ತದ ಮೇಲ್ಸೇತುವೆಗೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣ ಮಾಡಲು ಈಗಾಗಲೇ ನಿರ್ಧರಿಸಿದ್ದೇವೆ" ಎಂದು ಹೇಳಿದರು.
"ಕನ್ನಡದ ಮೊದಲ ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಅವರು ಒಂದು ಜನಾಂಗ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಸಾಮಾನ್ಯ ಕುಟುಂಬದಿಂದ ಬಂದು ಅಪ್ರತಿಮ ಹೋರಾಟಗಾರರಾಗಿ ಬೆಳೆದಿದ್ದು, ಸಮಸ್ತ ಕನ್ನಡಿಗರ ಶೌರ್ಯದ ಪ್ರತೀಕವಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ಬಲಗೈ ಬಂಟನಾಗಿದ್ದು ಬ್ರಿಟಿಷ್ ಇಸ್ಟ್ಇಂಡಿಯಾ ಕಂಪೆನಿ ವಿರುದ್ಧ ಹೋರಾಟ ಮಾಡಿದ ವೀರ" ಎಂದರು.
"ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣ ಅವರನ್ನು ಸದಾ ಸ್ಮರಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಅವರ ಧ್ಯೇಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಸಂಗೊಳ್ಳಿ ರಾಯಣ್ಣ ಅವರಿಗೆ ಸಲ್ಲಿಸುವ ನಮನ" ಎಂದು ಹೇಳಿದರು.