ಚಿಕ್ಕಮಗಳೂರು, ಜ.26 (Daijiworld News/PY) : "ಇತ್ತೀಚಿನ ದಿನಗಳಲ್ಲಿ ಸಂಘ-ಪರಿವಾರದ ಮೇಲೆ ಆರೋಪ ಎಸಗುವುದು ಕೆಲವರಿಗೆ ಫ್ಯಾಶನ್ ಆಗಿದೆ" ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, "ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕವೇ ನಿರಂತರ ಸಂಪರ್ಕದಲ್ಲಿ ಇರಬಹುದು. ಜನರ ಮಧ್ಯೆಯೇ ಇರಬೇಕು ಎಂದರೆ ಹಲವು ಉತ್ತಮ ವಿಚಾರಗಳಿವೆ. ಆದರೆ ಸುಳ್ಳು ಆರೋಪ ಮಾಡುವ ಮುಖಾಂತರ ಜನರೊಂದಿಗೆ ಸಂಪರ್ಕದಲ್ಲಿರಬೇಕು ಎನ್ನುವುದಾದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಷಯ" ಎಂದು ಹೇಳಿದರು.
ನಿಜಗುಣಾನಂದ ಸ್ವಾಮೀಜಿ ಜೊತೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ನಟ ಪ್ರಕಾಶ್ ರಾಜ್ ಸೇರಿದಂತೆ 14 ಜನರನ್ನು ಸಂಹಾರ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು.
"ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ. ನಿಮ್ಮ ಜೀನ್ಗಳು ಪಾಕಿಸ್ತಾನದಲ್ಲಿರಬಹುದು. ಜರ್ಮನಿಯ ನಾಜಿಗಳಲ್ಲಿರಬಹುದು. ಆದರೆ, ನನ್ನ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲು ಪ್ರಯತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು" ಎಂದು ಎಚ್ಡಿಕೆ ಅವರು ಟ್ವೀಟ್ ಮಾಡಿದ್ದರು.