ಬೆಂಗಳೂರು, ಜ.27 (Daijiworld News/PY) : "ವರ್ಷದ ಕೆಲ ದಿನ ರಾಜಕೀಯ ಭಾಷಣ ಮುಕ್ತ ದಿನಗಳನ್ನಾಗಿ ಆಚರಿಸುವುದು ಸೂಕ್ತ" ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಜ.26ರಂದು ಚಾಮರಾಜನಗರದ ಈದ್ಗಾ ಮೈದಾನದಲ್ಲಿ ನಡೆದ ಪರ್ಯಾಯ ಗಣರಾಜ್ಯೋತ್ಸವದಲ್ಲಿ ಪ್ರಸ್ತಾಪವಾದ ವಿಷಯಗಳ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್ ಅವರು, "ಗಣರಾಜ್ಯೋತ್ಸವ ದಿನಾಚರಣೆಯ ಸಮಯದಲ್ಲೇ ಮಾಜಿ ಸಂಸದರಿಗೆ, ಮಾಜಿ ಶಾಸಕರಿಗೆ ಇಂಥ ವಿಷಯ ಮಾತನಾಡಬೇಕಿತ್ತಾ. ಇಂತಹ ದಿನದಲ್ಲಿ ಜನರಿಗೆ ಪ್ರೇರಣೆ ನೀಡುವಂತ ಧನಾತ್ಮಕ, ರಚನಾತ್ಮಕ ವಿಚಾರಗಳನ್ನು ಮಾತನಾಡುವ ಪ್ರಯತ್ನ ಮಾಡಬೇಕಿತ್ತು. ವರ್ಷದ ಕೆಲ ದಿನ ರಾಜಕೀಯ ಮಾತನಾಡುವುದನ್ನು ಬಿಟ್ಟು ರಚನಾತ್ಮಕ ವಿಷಯಗಳತ್ತ ಗಮನ ಹರಿಸಬೇಕಿದೆ" ಎಂದರು.
"ಜ.26 ಭಾನುವಾರ ಚಾಮರಾಜನಗರದಲ್ಲಿ ಕೆಲವು ಸಂಘಟನೆಗಳು ಈದ್ಗಾ ಮೈದಾನದಲ್ಲಿ ಪ್ರತ್ಯೇಕ ಗಣರಾಜ್ಯೋತ್ಸವ ಸಮಾರಂಭವನ್ನು ಆಯೋಜಿಸಿದ್ದವು. ಜಿಲ್ಲಾಡಳಿತದ ಪ್ರಯತ್ನದ ಬಳಿಕವೂ ಸಂಘಟನೆಗಳು ಪಟ್ಟು ಹಿಡಿದು ಕಾರ್ಯಕ್ರಮ ಮಾಡಿಯೇ ಬಿಟ್ಟಿವೆ" ಎಂದು ತಿಳಿಸಿದರು.
"ಗಣರಾಜ್ಯೋತ್ಸವ ಸಭೆಯಲ್ಲಿ ಜಿಎಸ್ಟಿ, ಟಿಪ್ಪುಜಯಂತಿಯ ವಿಚಾರವಾಗಿ ಮಾತನಾಡುವ ಬದಲು ಗಣರಾಜ್ಯೋತ್ಸವದ ಮಹತ್ವ, ದೇಶ ಬೆಳೆದು ಬಂದ ಹಾದಿ, ನಾಗರಿಕರಾಗಿ ನಮ್ಮ ಕರ್ತವ್ಯ ಕುರಿತು ಒಂದು ನಾಲ್ಕು ಮಾತುಗಳನ್ನಾಡಿದ್ದರೆ ಅದನ್ನು ಒಪ್ಪಬಹುದಾಗಿತ್ತು" ಎಂದು ಹೇಳಿದರು.
"ಏನೇನು ಅನಾಹುತಕ್ಕೆ ಪ್ರತ್ಯೇಕತಾ ಮನೋಭಾವ ದಾರಿ ಮಾಡಿಕೊಟ್ಟಿದೆ ಎಂಬುದು ಈ ಇಬ್ಬರು ಪ್ರಬುದ್ಧರಿಗೆ ಗೊತ್ತಾಗಬೇಕಿತ್ತು. ಹಲವು ಬಾರಿ ಶಾಸಕರಾಗಿದ್ದವರಿಂದ, ಸಂಸದರಾಗಿದ್ದವರಿಂದ ಪ್ರತ್ಯೇಕತೆಯನ್ನು ಬೆಂಬಲಿಸುವ ಕಾರ್ಯ ಆಗಬಾರದಿತ್ತು" ಎಂದು ತಿಳಿಸಿದರು.