ಬೆಂಗಳೂರು, ಜ 27 (Daijiworld News/MB): ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿದ್ದು ಶಾಸಕರಿಗೆ ಅನುದಾನ ನೀಡುತ್ತಿಲ್ಲ. ತೆರಿಗೆ ಸಂಗ್ರಹ ಕಾರ್ಯ ಕೂಡಾ ಸೂಕ್ತವಾಗಿ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿಯನ್ನು ಟೀಕೆ ಮಾಡುತ್ತಿದ್ದ ವಿಪಕ್ಷಕ್ಕೆ ಕೆಲ ಸಮಯದಿಂದ ಬಿಡುಗಡೆಯಾಗದೆ ಸ್ಥಗಿತವಾಗಿದ್ದ ಶಿಕ್ಷಕರ ವೇತನದ ಹಣವನ್ನು ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡುವ ಮೂಲಕ ಉತ್ತರ ನೀಡಿದ್ದಾರೆ.
ಕೇವಲ ಎರಡು ದಿನಗಳ ಅಂತರದಲ್ಲಿ ಶಿಕ್ಷಣ ಇಲಾಖೆಗೆ 556 ಕೋಟಿ ಬಿಡುಗಡೆ ಮಾಡಲಾಗಿದ್ದು ರಾಜ್ಯದ ಬೊಕ್ಕಸ ಬರಿದಾಗಿಲ್ಲ ಎಂದು ಈ ಮೂಲಕವೇ ತಿಳಿಸಿದ್ದಾರೆ.
ಜನವರಿ 23 ರಂದು ಎಸ್.ಎಸ್.ಎ ಮತ್ತು ಆರ್.ಎಂ.ಎಸ್.ಎ ಶಿಕ್ಷಕರ ವೇತನಕ್ಕಾಗಿ 370.47 ಕೋಟಿ ಬಿಡುಗಡೆ ಮಾಡಿದ್ದು ಅದಾದ ಎರಡೇ ದಿನದಲ್ಲಿ ಅಂದರೆ ಜನವರಿ 25 ರಂದು ಅತಿಥಿ ಶಿಕ್ಷಕರ ವೇತನಕ್ಕಾಗಿ 186 ಕೋಟಿ ಬಿಡುಗಡೆ ಮಾಡಿದ್ದಾರೆ.
ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಗುರಿಯಿಟ್ಟಿರುವ ತೆರಿಗೆಯನ್ನು ಸಂಗ್ರಹ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಾಗಿದ್ದು ಈ ಹಿನ್ನಲೆಯಲ್ಲಿ ಬಜೆಟ್ನಲ್ಲಿ ಉತ್ತಮ ಯೋಜನೆಗಳನ್ನು ತರುವ ಚಿಂತನೆ ನಡೆಸಿದ್ದಾರೆ.
ಹಾಗೆಯೇ ರೈತರಿಗಾಗಿ ಸಾಲ ಮಾಡಿಯಾದರೂ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಎಂದು ತಿಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬೊಕ್ಕಸ ಬರಿದಾಗಿದೆ ಎಂದು ಟೀಕೆ ಮಾಡಿದವರಿಗೆ ಬಜೆಟ್ನಲ್ಲಿ ಉತ್ತರ ಕೊಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.