ವಿಜಯಪುರ, ಜ.27 (Daijiworld News/PY) : "ನಾನು ಪಕ್ಷ ಬಯಸಿದರೆ ರಾಜೀನಾಮೆಗೂ ಸಿದ್ಧ. ಸಂಪುಟ ವಿಸ್ತರಣೆಯ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಷದ ಮುಖಂಡರು ಉಪಮುಖ್ಯಮಂತ್ರಿ ಸ್ಥಾನವನ್ನು ಬಿಡು ಎಂದರೆ ಖುಷಿಯಿಂದ ಬಿಟ್ಟುಕೊಡುವೆ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, "ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾನು ಬದ್ದ. ಪಕ್ಷದಿಂದಲೇ ನಾನು ಬೆಳೆದಿದ್ದೇನೆ. ಡಿಸಿಎಂ ಸ್ಥಾನವನ್ನು ಬಿಟ್ಟುಕೊಡಲು ಕೇಳಿದರೆ ಸಂತೋಷದಿಂದ ಬಿಟ್ಟು ಕೊಡುತ್ತೇನೆ" ಎಂದರು.
"ನಾನು ಪ್ರವಾಸದಲ್ಲಿ ಇರುವ ಕಾರಣ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ನನಗೆ ತಿಳಿದಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡುತ್ತಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿ, ಯಡಿಯೂರಪ್ಪ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಬೇರೆಯವರ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ. ಸಚಿವ ಸ್ಥಾನ ಬಿಟ್ಟುಕೊಡು ಎಂದು ಕೇಳಿದರೆ ಸಂತೋಷದಿಂದ ಬಿಟ್ಟು ಕೊಡುತ್ತೇನೆ" ಎಂದು ತಿಳಿಸಿದರು.
"ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೂ ಸ್ಥಾನ ಮಾನ ಸಿಗಬೇಕು. ಸಾಮಾನ್ಯ ಜನರಿಗೆ ನೀಡುವ ವ್ಯವಸ್ಥೆಯೇ ನಮಗೂ ಕೊಡಿ. ಬೇರೆ ಯಾವುದೇ ವಿಶೇಷ ಸೌಲಭ್ಯವೂ ಬೇಡ ಎಂದು ನಾನು ಮೊದಲೇ ಹೇಳಿದ್ದೆ. ಡಿಸಿಎಂ ಸ್ಥಾನ ಹೆಚ್ಚಾಗಿರುವುದರಿಂದ ಜನರಿಗೆ ಯಾವುದೇ ತೊಂದರೆ ಆಗಿಲ್ಲ" ಎಂದು ಹೇಳಿದ್ದಾರೆ.