ನವದೆಹಲಿ ಜ 27 (Daijiworld News/MSP): ಯುವತಿಯರನ್ನು ಬಲವಂತವಾಗಿ ಮತಾಂತರಗೊಳಿಸಿ ಬೇರೆ ಬೇರೆ ದೇಶಗಳಿಗೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿದ ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ "ಲವ್ ಜಿಹಾದ್' ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ನಾನು ಬಲವಂತದ ಮತಾಂತರ ಮತ್ತು ಲವ್ ಜಿಹಾದ್ ಹಾಗೂ ದೇಶವನ್ನು ತೊರೆಯುವ ಯುವತಿಯ ಕುರಿತು ವಿವರವಾದ ವಿಚಾರಣೆ ನಡೆಸಿದೆ. ಆದರೆ ಇಲ್ಲಿ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗುವುದು ಸಮಸ್ಯೆಯಲ್ಲ ಆದಕ್ಕಿಂತಲೂ ಅವರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಇದು ಕೇರಳದಲ್ಲಿ ಹೆಚ್ಚಾಗಿ ನಡೆಯುತ್ತಿದೆ" ಎಂದು ಶರ್ಮಾ ರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
"ಲವ್ ಜಿಹಾದ್ ಪ್ರಕರಣದಲ್ಲಿ ಅವುಗಳಿಗೆ ಬಲಿಯಾದ ಹೆಣ್ಣುಮಕ್ಕಳನ್ನು ವಿದೇಶಗಳಿಗೆ ಬಲವಂತವಾಗಿ ಕರೆದೊಯ್ಯಲಾಗುತ್ತದೆ ಮತ್ತುಅವರನ್ನೆಲ್ಲಾ ಅಲ್ಲಿ ಲೈಂಗಿಕ ಭೋಗದ ವಸ್ತುವಿನಂತೆ ಬಳಸಲಾಗುತ್ತದೆ. ಕೇರಳ ಸರ್ಕಾರ ಮತ್ತು ಮುಖ್ಯಮಂತ್ರಿ ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು. ಇದು ಕೆಲವು ಸಮುದಾಯಗಳ ಸಮಸ್ಯೆಯಾಗದೇ ದೇಶದ ಸಮಸ್ಯೆಯಂತೆ ಕಾಣಿಸುತ್ತಿದೆ" ಎಂದು ಅವರು ಹೇಳಿದರು.