ನವದೆಹಲಿ, ಜ 27 (Daijiworld News/MB) : ಚೀನಾದಿಂದ ಬಿಹಾರಕ್ಕೆ ಹಿಂದಿರುಗಿದ ಬಾಲಕಿಯೊಬ್ಬಳಲ್ಲಿ ಕೊರೋನಾ ವೈರಸ್ ಸೋಂಕು ತಗಲಿರುವ ಲಕ್ಷಣಗಳು ಕಂಡುಬಂದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಗೆಯೇ ಚೀನಾದಿಂದ ಹಿಂದಿರುಗಿದ ರಾಜಸ್ಥಾನದ ವೈದ್ಯರೊಬ್ಬರಲ್ಲಿಯೂ ಕೊರೋನಾ ವೈರಸ್ ಸೋಂಕು ಇರುವ ಲಕ್ಷಣಗಳು ಕಂಡು ಬಂದಿದ್ದು ಅವರ ರಕ್ತದ ಮಾದರಿ ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ರವಾನಿಸಲಾಗಿದೆ ಎಂದು ರಾಜಸ್ಥಾನ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಚೀನಾದಿಂದ ಬಿಹಾರಕ್ಕೆ ಬಂದ ಬಾಲಕಿಯಲ್ಲಿ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಮಾತನಾಡಿದ ಪಾಟ್ನಾ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ನಮ್ಮ ಗಮನಕ್ಕೆ ಈ ವಿಷಯ ಬಂದಿದ್ದು ಆಕೆಯನ್ನು ಈ ಕೂಡಲೇ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ 100ಕ್ಕೂ ಅಧಿಕ ಜನರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಹಾಗೆಯೇ ಈ ಕುರಿತು ಪ್ರಧಾನಿ ಕಚೇರಿಯು ಶನಿವಾರ ಪರಿಶೀಲನೆ ನಡೆಸಿದೆ.
ಭಾನುವಾರ 29,700ಕ್ಕೂ ಅಧಿಕ ಜನರು ದೇಶದ ವಿವಿಧೆಡೆಗೆ 137 ವಿಮಾನಗಳಿಂದ ಬಂದಿದ್ದು ಅವರನ್ನು ಕೊರೋನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.