ನವದೆಹಲಿ, ಜ.27 (Daijiworld News/PY) : ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಶೇ 100ರಷ್ಟು ಪಾಲು ಮಾರಾಟ ಮಾಡುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಇದೊಂದು ದೇಶದ್ರೋಹದ ಕೆಲಸ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಒಪ್ಪಂದ ಪೂರ್ತಿಯಾಗಿ ದೇಶದ್ರೋಹದ ಕೆಲಸ ಎಂದು ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ನಷ್ಟದ ಪ್ರಮಾಣ ಇಳಿಕೆಯಾಗಿತ್ತು.ಪ್ರಧಾನಿ ಮೋದಿಯವರೇ, ಏರ್ ಇಂಡಿಯಾವನ್ನು ಬಲಪಡಿಸುವುದನ್ನು ಬಿಟ್ಟು ಸರ್ಕಾರ ಯಾಕೆ ಮಾರಾಟ ಮಾಡಬೇಕೆಂದೇ ಹೊರಟಿದೆ ಎಂದು ಕೇಳಿದ್ದಾರೆ.
ಅಲ್ಲದೇ, ಸರ್ಕಾರದ ಈ ತೀರ್ಮಾನಕ್ಕೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಬಳಿ ಹಣವಿಲ್ಲ, ಆರ್ಥಿಕ ಬೆಳವಣಿಗೆಗೆ ಶೇ 5ಕ್ಕಿಂತಲೂ ಕಡಿಮೆ ಇದೆ. ನರೇಗಾ ಯೋಜನೆಗೆ ನೀಡಬೇಕಿರುವ ಲಕ್ಷಾಂತರ ರೂಪಾಯಿ ಬಾಕಿ ಇವೆ. ಹೀಗಾಗಿ ಸರ್ಕಾರದ ಬಳಿ ಇರುವ ಅಮೂಲ್ಯ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟೀಕಿಸಿದ್ದಾರೆ.