ಹಾಸನ, ಜ.27 (Daijiworld News/PY) : "ತಿಂಗಳ ಅಂತ್ಯದೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಸಿಂಗನಕುಪ್ಪೆ ಗ್ರಾಮದ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಅನೇಕರು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿದ್ದಾರೆ. ರಾಜ್ಯಕ್ಕೆ ಬರಲು ಹಲವಾರು ಕೈಗಾರಿಕೋದ್ಯಮಿಗಳು ಸಮ್ಮತಿ ನೀಡಿದ್ದಾರೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು 40ಕ್ಕೂ ಅಧಿಕ ಕೈಗಾರಿಕೋದ್ಯಮಿಗಳನ್ನು ವೈಯುಕ್ತಿಕವಾಗಿ ಭೇಟಿ ಮಾಡಿ ವಿನಂತಿಸಿದ್ದೇನೆ. ದಾವೋಸ್ ಭೇಟಿ ನೀಡಿದ್ದು ಫಲಪ್ರದವಾಗಿದೆ" ಎಂದರು.
"ಕೈಗಾರಿಕೆ ಅಭಿವೃದ್ಧಿ ಮಾಡಲು ಭರವಸೆ ದೊರೆತಿದೆ. ಇದರಿಂದ ಕೃಷಿ, ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಪ್ರಯೋಜನವಾಗಲಿದೆ. ಎಸ್.ಎಂ.ಕೃಷ್ಣ ಅವರ ಬಳಿಕ 16 ವರ್ಷಗಳು ಕಳೆದ ನಂತರ ತಾವು ದಾವೋಸ್ಗೆ ಹೋಗಿದ್ದು ತುಂಬಾ ಉಪಯೋಗವಾಗಿದೆ" ಎಂದು ಹೇಳಿದರು.
"ಮೈಸೂರು ಜಿಲ್ಲೆಯ ದೇವಿತಂದ್ರೆ ಗ್ರಾಮದಲ್ಲಿ ದೇವಾಲಯದ ರಾಜಗೋಪುರ ಉದ್ಘಾಟನೆಯ ಬಳಿಕ , ಕೊಡಗಿನಲ್ಲಿ 1500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು" ಎಂದು ತಿಳಿಸಿದರು.