ವಿಜಯಪುರ, ಜ.27 (Daijiworld News/PY) : "ಪಿಎಫ್ಐ ಸೇರಿದಂತೆ ದೇಶವಿರೋಧಿ ಚಟುವಟಿಕೆ ಮಾಡುವ ಉದ್ದೇಶಕ್ಕೆ ಪಾಕಿಸ್ತಾನದಿಂದ ಹಣ ಬರುತ್ತಿದ್ದು, ಪಿಎಫ್ಐ, ಎಸ್ಡಿಪಿಐ ಸೇರಿದಂತೆ ದೇಶವಿರೋಧಿಯಾದ ಇತರೆ ಸಂಘಟನೆಗಳನ್ನು ದೇಶದ ಕಾನೂನಿನ ಅಡಿಯಲ್ಲಿ ನಿಷೇಧ ಮಾಡಲೇಬೇಕು" ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿದೇಶದಿಂದ ಅಕ್ರಮವಾಗಿ ಬಂದ ಹಣವನ್ನು ಬಳಕೆ ಮಾಡಿ ದೇಶದ ನಾಗರಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ವಿದೇಶಿ ಹಣ ಬರುವ ಎನ್ಜಿಓಗಳನ್ನು ರದ್ದು ಮಾಡಿದೆ" ಎಂದು ತಿಳಿಸಿದರು.
"ದೇಶವಿರೋಧಿ ಚಟುವಟಿಕೆಗಳನ್ನು ಗಮನಿಸಿದರೆ ಇವರಿಗೆಲ್ಲ ವ್ಯವಸ್ಥಿತವಾಗಿ ಹಣ ಬರುತ್ತಿದೆ ಎಂದು ತಿಳಿಯುತ್ತಿದೆ. ಈಗಾಗಲೇ ದೇಶಾದ್ಯಂತ ಇಂತಹ ಅಕ್ರಮ ಖಾತೆಗಳನ್ನು ರದ್ದು ಪಡಿಸುವಂತ ಕಾರ್ಯವನ್ನು ಕೇಂದ್ರದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾದ ಎನ್ಐಏ ಮಾಡಿದೆ" ಎಂದರು.
"ಕೇಂದ್ರ ಸರ್ಕಾರವು ಇಂತಹ ಸಂಘಟನೆಗಳ ಮೇಲೆ ಕಣ್ಣಿಡಬೇಕು. ಪಿಎಫ್ಐ, ಎಸ್ಡಿಪಿಐ ಸೇರಿದಂತೆ ಇತರೆ ದೇಶವಿರೋಧಿ ಸಂಘಟನೆಗಳನ್ನು ದೇಶದ ಕಾನೂನಿನ ಅಡಿಯಲ್ಲಿ ನಿಷೇಧ ಪಡಿಸಬೇಕು" ಎಂದು ಹೇಳಿದರು.