ನವದೆಹಲಿ, ಜ.27 (Daijiworld News/PY) : ಪ್ರತ್ಯೇಕ ಬೋಡೋ ಲ್ಯಾಂಡ್ಗೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಅಸ್ಸಾಂನ ಬೋಡೋ ಜನರ ಬೇಡಿಕೆಗೆ ಕೊನೆಗೂ ಮುಕ್ತಿ ದೊರಕಿದ್ದು, ಸೋಮವಾರ ಬೋಡೋ ವಿವಾದ ಪರಿಹರಿಸುವ ಹಿನೆಲೆಯಲ್ಲಿ ನಿಷೇಧಿತ ಬಂಡುಕೋರ ಸಂಘಟನೆ ಎನ್ಡಿಎಫ್ಬಿ, ಎಬಿಎಸ್ ಸಂಘಟನೆಯೊಂದಿಗಿನ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಮಾಡಿದೆ.
ಬೋಡೋ ಲ್ಯಾಂಡ್ ಬೇಡಿಕೆಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೀಗ ಬೋಡೋ ಲ್ಯಾಂಡ್ ಇನ್ನು ಮುಂದೆ ಬೋಡೋಲ್ಯಾಂಡ್ ಟೆರ್ರಿಟೋರಿಯಲ್ ರೀಜನ್ (ಬಿಟಿಆರ್) ಎಂದು ಕರೆಯಲ್ಪಡಲಿದೆ. ಅಲ್ಲದೇ ಆಡಳಿತಾತ್ಮಕವಾಗಿ ಹೆಚ್ಚಿನ ಅಧಿಕಾರ ದೊರಕಲಿದೆ ಎಂದು ವರದಿ ತಿಳಿಸಿದೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೋನೋವಾಲ್, ಎನ್ಡಿಎಫ್ಬಿ, ಎಬಿಎಸ್ ಯುನ ಪ್ರಮುಖ ನಾಯಕರು, ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯೇಂದ್ರ ಗರ್ಗ್ ಮತ್ತು ಅಸ್ಸಾಂ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬೋಡೋಲ್ಯಾಂಡ್ ನ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ.
ಕಳೆದ ಹಲವು ವರ್ಷಗಳಲ್ಲಿ ಅಸ್ಸಾಂನಲ್ಲಿ ಬೋಡೋ ಬಂಡುಕೋರರ ಹಿಂಸಾಚಾರಕ್ಕೆ 4 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಇನ್ನು ಮುಂದೆ ಬೋಡೋ ಲ್ಯಾಂಡ್ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಸೋಮವಾರ ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಹಾಗೂ ಬೋಡೋ ಪ್ರತಿನಿಧಿಗಳ ಜೊತೆ ಮುಖ್ಯವಾದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಿಂದ ಅಸ್ಸಾಂ ಹಾಗೂ ಬೋಡೋ ಜನರಿಗೆ ಭವಿಷ್ಯದಲ್ಲಿ ಸುವರ್ಣ ಅವಕಾಶ ಸಿಗಲಿದೆ. ಹಿಂಸಾಚಾರ ಬಿಟ್ಟು ಶರಣಾಗುವ ಎಲ್ಲಾ ಬಂಡುಕೋರ ಪ್ರತಿನಿಧಿಗಳಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಸರಿಯಾದ ಸಮಯದಲ್ಲಿ ಪೂರೈಸಲಾಗುವುದು. ಜನವರಿ 30 ರಂದು 1550 ಬಂಡುಕೋರರು 130 ಶಸ್ತ್ರಾಸ್ತ್ರಗಳ ಜೊತೆ ಶರಣಾಗಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.