ಹಾವೇರಿ, ಜ.27 (Daijiworld News/PY) : "ನನಗೆ ಸಿದ್ದರಾಮಯ್ಯ ಅವರು ಬೈದಾಗಲೆಲ್ಲ ಒಳ್ಳೆಯದಾಗಿದೆ. ನಾನು ಅದನ್ನು ಆಶೀರ್ವಾದವೆಂದು ಕೊಂಡಿದ್ದೇನೆ.ನಮ್ಮ ಕ್ಷೇತ್ರಕ್ಕೆ ಬಂದು ಭಾಷಣ ಮಾಡಿ ಟೀಕಿಸಿದ್ದರು, ಉಪಚುನಾವಣೆಯಲ್ಲಿ 10 ಸಾವಿರ ಮತಗಳು ಹೆಚ್ಚು ಬಂದಿದ್ದವು" ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ ಬಂದು ಭಾಷಣ ಮಾಡಿ ಟೀಕಿಸಿದ್ದರು, ಅವರು ಬೈದಾಗಲೆಲ್ಲಾ ನನಗೆ ಒಳ್ಳೆಯದೇ ಆಗಿದೆ. ನಾನು ಅದನ್ನು ಆಶೀರ್ವಾದವೆಂದು ಕೊಂಡಿದ್ದೇನೆ. ಉಪಚುನಾವಣೆಯಲ್ಲಿ 10 ಸಾವಿರ ಮತಗಳು ಹೆಚ್ಚು ಬಂದಿದ್ದವು" ಎಂದರು.
"ತಿಂಗಳ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಎರಡು ಮೂರು ದಿನ ಕಾಯಿರಿ ಎಲ್ಲವೂ ಸರಿಯಾಗುತ್ತದೆ.ನಾವೇನು ಅಂತರ್ಪಿಶಾಚಿಗಳಲ್ಲ. ವಿಶ್ವನಾಥರಿಗೆ ಸಚಿವ ಸ್ಥಾನ ನೀಡಬೇಡಿ ಎಂದು ಯಾರೂ ಹೇಳಿಲ್ಲ, ಅವರು ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಸೋತವರು, ಗೆದ್ದವರು ಎಂಬುದಿಲ್ಲ. ಮುಖ್ಯಮಂತ್ರಿಯವರು ಕೆಲವು ಮಾನದಂಡಗಳನ್ನು ಅನುಸರಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದರು.
"ಬಿಜೆಪಿ ಸೇರಿದಾಗಿನಿಂದ ನಾವೆಲ್ಲರೂ ಬಿಜೆಪಿಯವರು. ನಾನು ಇಂಥದ್ದೇ ಸಚಿವ ಸ್ಥಾನ ಬೇಕೆಂದು ಹೇಳಿಲ್ಲ. ಯಾವುದೇ ಸ್ಥಾನ ನೀಡಿದರೂ ಅದನ್ನು ಒಪ್ಪಿಕೊಳ್ಳುತ್ತೇನೆ. ಬಿಜೆಪಿಯಲ್ಲಿ ಯಾವುದೇ ರೀತಿಯಾದ ಭೇದಭಾವವಿಲ್ಲ" ಎಂದು ಹೇಳಿದರು.