ಮೈಸೂರು, ಜ.27 (Daijiworld News/PY) : "ಕುಮಾರಸ್ವಾಮಿ ಅವರಿಗೆ ಯಾರಿಂದ ಬೆದರಿಕೆ ಇದೆ ಅಂತ ಗೊತ್ತಿಲ್ಲ. ಅವರ ಜನಾಂಗ ಕೂಡ ಅವರಿಂದ ದೂರ ಸರಿಯುತ್ತಿದೆ. ಹೀಗಾಗಿ ಅನುಕಂಪದ ಮೂಲಕ ಹತ್ತಿರವಾಗಲು ಹೊರಟಿದ್ದಾರೆ" ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಜಿಲ್ಲೆಯ ಕೆಆರ್ ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಮಾತನಾಡಿದ ಅವರು, "ನಾವು ಕುಮಾರಸ್ವಾಮಿ ಅವರು ಪದೇ ಪದೇ ಕಣ್ಣೀರು ಹಾಕುವುದನ್ನು ನೋಡಿದ್ದೇವೆ. ನಿಜವಾಗಲೂ ನಿಮಗೆ ಬೆದರಿಕೆ ಇದ್ದರೆ ದೂರು ಕೊಡಿ. ಗೃಹ ಇಲಾಖೆ ಅಥವಾ ಮುಖ್ಯಮಂತ್ರಿಗಳಿಗೆ ದಾಖಲೆ ತಲುಪಿಸಿ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ನನಗೆ ಬೆದರಿಕೆ ಇದೆ ಎಂದರೆ ಹೇಗೆ" ಎಂದು ಹೇಳಿದರು.
"ಬೀದಿಯಲ್ಲಿ ನಿಂತಿದ್ದ ಜಮೀರ್ ಅವರನ್ನು ನೋಡಿ ದೇವೇಗೌಡರ ಕುಟುಂಬದವರು ಕರೆದುಕೊಂಡು ಬಂದು ಎಂಎಲ್ಎ ಮಾಡಿದರು. ಆದರೆ ಅವರ ಕುಟುಂಬಕ್ಕೆ ಮೋಸ ಮಾಡಿದ್ದಾರೆ. ಈಗ ನನ್ನ ಬಗ್ಗೆ ಮಾತಾಡುತ್ತಾನೆ" ಎಂದು ತಿಳಿಸಿದರು.
"ಸಿಎಎ ವಿಚಾರದಲ್ಲಿ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆಯೇ ಹೊರತು ಪ್ರಚೋದನಕಾರಿ ಭಾಷಣ ಮಾಡಿಲ್ಲ. ಕ್ರಿಮಿನಲ್ ಕೇಸ್ ದಾಖಲಿಸುವಂತಹ ತಪ್ಪೇನು ನಾನು ಮಾಡಿಲ್ಲ. ಯು.ಟಿ.ಖಾದರ್.ಅವರು ಸಿಎಎ ಜಾರಿಯಾದರೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದ್ದು. ನಿಮಗೆ ತಾಕತ್ತಿದ್ದರೆ ಪ್ರಚೋದನಾಕಾರಿ ಮಾತುಗಳನ್ನಾಡಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ" ಎಂದು ಹೇಳಿದರು.
"ನನಗೆ ಸ್ಪರ್ಧೆ ಮಾಡಬೇಡಿ ಅಂತಾ ಸಿಎಂ ಹೇಳಿದ್ದರು ಎಂದು ವಿಶ್ವನಾಥ್ ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಮಾತುಗಳನ್ನು ವಿಶ್ವನಾಥ್ ಕೇಳಬೇಕಿತ್ತು. ಈಗ ಸೋತಿದ್ದಾರೆ, ನೋವು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ ಅವರ ಮಾತಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ" ಎಂದು ಹೇಳಿದರು.