ನವದೆಹಲಿ, ಜ 28 ( Daijiworld News/MB) : "ನೀವು ಸಾಮಾನ್ಯ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಆ ಕುರಿತು ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಪ್ರಸ್ತಾಪ ಮಾಡಿ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪಕ್ಷದ ಸಂಸದರಿಗೆ ಸಲಹೆ ನೀಡಿದ್ದಾರೆ.
ಸಂಸತ್ತಿನ ಎರಡೂ ಸದನಗಳಲ್ಲಿ ಬಿಜೆಪಿಯನ್ನು ಮಟ್ಟಹಾಕಲು ಇರುವ ಸಾಧ್ಯತೆಗಳ ಕುರಿತು ಪಕ್ಷದ ಕಾರ್ಯತಂತ್ರ ರೂಪಿಸಲು ಸೋಮವಾರ ಸೋನಿಯಾಗಾಂಧಿ ತಮ್ಮ ನಿವಾಸದಲ್ಲಿ ಪಕ್ಷದ ಸಂಸದೀಯ ಕಾರ್ಯತಂತ್ರ ಸಮಿತಿಯೊಂದಿಗೆ ಸುದೀರ್ಘ ಚರ್ಚೆ ನಡೆಸಿ , "ಸಾಮಾನ್ಯ ಜನರ ಸಮಸ್ಯೆಗಳ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ದನಿಯೆತ್ತಿ. ಭಾರತ ಸರ್ಕಾರ ಜನರ ಸಮಸ್ಯೆಗಳತ್ತ ಗಮನ ಹರಿಸಬೇಕು. ನಾವು ಈ ಹಿನ್ನಲೆಯಲ್ಲಿ ಎಲ್ಲಾ ವಿರೋಧ ಪಕ್ಷಗಳನ್ನು ಮುಖ್ಯವಾಗಿ ಯುಪಿಎ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು" ಎಂದು ಸೂಚಿಸಿದ್ದಾರೆ.
ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ, ರಾಷ್ಟ್ರೀಯ ನಾಗರಿಕ ನೋಂದಣಿ, ನಿರುದ್ಯೋಗ, ಆರ್ಥಿಕ ಕುಸಿತದ ಕುರಿತಾಗಿ ಮಾತನಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಮಾತನಾಡಿ, "ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ನಾವು ಹೋರಾಟ ನಡೆಸುತ್ತೇವೆ. ಸಂವಿಧಾನ ಮತ್ತು ಅರ್ಥ ವ್ಯವಸ್ಥೆ ರಕ್ಷಿಸಲು ಶ್ರಮಿಸುತ್ತೇವೆ. ಈ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ" ಎಂದು ಹೇಳಿದ್ದರು.
ಸಭೆಯಲ್ಲಿ ಕೆ.ಸುರೇಶ್, ಗುಲಾಂ ನಬಿ ಆಜಾದ್, ಜೈರಾಂ ರಮೇಶ್, ಆನಂದ್ ಶರ್ಮಾ, ಅಹ್ಮದ್ ಪಟೇಲ್, ಮಾಣಿಕ ಟಾಗೋರ್, ಮನೀಶ್ ತಿವಾರಿ, ಗೌರವ್ ಗೊಗೊಯ್ ಮತ್ತು ಕೆ.ಸಿ.ವೇಣುಗೋಪಾಲ್ ಪಾಲ್ಗೊಂಡಿದ್ದರು.
ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದೆ.