ಹುಬ್ಬಳ್ಳಿ, ಜ 28 ( Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (ಪಿಎಫ್ಐ) ಹಣ ನೀಡಲಾಗಿದೆ ಎನ್ನುವ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಣ ಎಲ್ಲಿಂದ ಬಂದಿದೆ. ಹೇಗೆ ಬಂದಿದೆ ಎಂಬುವುದರ ಬಗ್ಗೆ ತನಿಖೆಯಾಗಬೇಕು. ಹೊರ ದೇಶಗಳಿಂದ ಅಕ್ರಮವಾಗಿ ಹಣ ಬಂದಿದ್ದಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಸಿಎಎ ವಿಷಯದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟ. ಇದು ಮುಸ್ಲಿಮರಷ್ಟೇ ಅಲ್ಲ, ದಲಿತರು, ಆದಿವಾಸಿಗಳು, ಬುಡಕಟ್ಟು ಜನ, ಅಲೆಮಾರಿಗಳ ಜನರ ವಿರೋಧಿಯಾಗಿದೆ ಎಂದರು.
ಬಿಜೆಪಿಯವರು ಬೇರೆ ಪಕ್ಷಗಳ ಶಾಸಕರನ್ನು ತಮ್ಮ ಅಧಿಕಾರಕ್ಕಾಗಿ ಹಣ ಕೊಟ್ಟು ತಮ್ಮ ಪಕ್ಷಕ್ಕೆ ಎಳೆದುಕೊಂಡಿದ್ದಾರೆ. ಸಚಿವ ಸ್ಥಾನದ ಆಸೆ ಹುಟ್ಟಿಸಿ ಈಗ ಅದನ್ನು ಈಡೇರಿಸಲಾಗದೆ ಒದ್ದಾಡುತ್ತಿದ್ದಾರೆ. ಮುಖ್ಯಮಂತ್ರಿಗೆ ಇರುವ ಪರಮಾಧಿಕಾರವೆಂದರೆ ಸಂಪುಟ ವಿಸ್ತರಣೆ. ಆದರೆ ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೆಂಬುದೇ ಇಲ್ಲ. ಮುಖ್ಯಮಂತ್ರಿಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಅಧಿಕಾರವೇ ಇಲ್ಲದಂತಾಗಿದೆ. ಆದರಿಂದಾಗಿ ಯಡಿಯೂರಪ್ಪ ಈಗ ವಿಲಿವಿಲಿ ಒದ್ದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹಣ ಬಾರದ ಹಿನ್ನಲೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಅಭಿವೃದ್ಧಿ ಬಗ್ಗೆ ಯಾವುದೇ ಪ್ರಶ್ನೆ ಎತ್ತಿದ್ದರೂ ಯಡಿಯೂರಪ್ಪ ಬಜೆಟ್ ನಂತರ ನೋಡಿ ಎಂದು ಹೇಳುತ್ತಿದ್ದಾರೆ. ಅವರ ಬಳಿ ಏನಾದರೂ ಮಂತ್ರ ದಂಡವಿದೆಯೋ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯಾಗಿದ್ದಾಗ ಹಿಂತಿರುಗಿಸಿದ್ದ ರಾಜ್ಯ ವಕೀಲರ ಪರಿಷತ್ನ ಪರವಾನಗಿ ವಾಪಸ್ ನೀಡುವಂತೆ ಪತ್ರ ಬರೆದಿದ್ದೇನೆ. ಮತ್ತೆ ವಕೀಲಿಕಿ ವೃತ್ತಿ ಆರಂಭಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿ 1983ರಲ್ಲಿ ಕೊನೆಯ ಬಾರಿಗೆ ಕರಿ ಕೋಟ್ ಧರಿಸಿದ್ದೆ. ಈಗ ಮತ್ತೆ ಆ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ತನಿಖಾ ಸಂಸ್ಥೆ ಜಾರಿ ನಿರ್ದೇಶಾನಲಯ (ಇ.ಡಿ) ಯು ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳಿಗೆ ಪಿಎಫ್ಐ ಹಣ ಬಳಕೆಯಾಗಿದೆ ಎಂದು ಹೇಳಿದ್ದು ಈ ಆರೋಪವನ್ನು ಅಲ್ಲಗಳೆದಿರುವ ಪಿಎಫ್ಐ ಇ.ಡಿ. ಯ ಈ ಆರೋಪ ಆಧಾರರಹಿತವಾಗಿದೆ. ಹಾದಿಯಾ ಪ್ರಕರಣದ ವಕಾಲತ್ತು ವಹಿಸಿದ್ದಕ್ಕಾಗಿ ವಕೀಲರಿಗೆ ೨೦೧೭ರಲ್ಲಿ ಹಣ ನೀಡಲಾಗಿದೆ. ಇದನ್ನು ಬಹಿರಣಗವಾಗಿಯೇ ಘೋಷಣೆ ಮಾಡಲಾಗಿದೆ. ಆಗ ಹಣ ವರ್ಗಾವಣೆ ಮಾಡಿದ್ದ ಮಾಹಿತಿಯನ್ನು ಈಗ ಸಿಎಎ ವಿರುದ್ಧದ ಪ್ರತಿಭಟನೆಗೆ ಜೋಡಿಸಲಾಗುತ್ತಿದ್ದು ಇದರ ಹಿಂದೆ ಸಂಘಟನೆಗೆ ಕೆಟ್ಟ ಹೆಸರು ತರುವ ಉದ್ದೇಶವಿದೆ ಎಂದು ಪ್ರತಿಪಾದಿಸಿದೆ.