ನವದೆಹಲಿ, ಜ 28 ( Daijiworld News/MB) : ಸೋಮವಾರ ವಾಯುವ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಮನೀಷ ಚೌಧರಿ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಕೇಂದ್ರ ಸಚಿವ ಅನುರಾಗ ಠಾಕೂರ್ ರ್ಯಾಲಿಯಲ್ಲಿ ಗೋಲಿಮಾರೋ ಘೋಷಣೆಗಳು ಕೇಳಿಬಂದಿದ್ದು ಈ ಹಿನ್ನಲೆಯಲ್ಲಿ ಘೋಷಣಾ ವಾಕ್ಯಕ್ಕೆ ಸಂಬಂಧಿಸಿ ವರದಿ ಸಲ್ಲಿಸುವಂತೆ ವಾಯುವ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೆಹಲಿ ಸಿಇಒ ಕಚೇರಿ ಸೂಚನೆ ನೀಡಿದೆ.
ಘೋಷಣೆಯು ದೇಶ್ ಕೆ ಗದ್ದಾರೋಂ ಕೋ ಗೋಲಿಮಾರೋ ಎಂದು ಆಗಿದ್ದು ಇದರ ಮೊದಲ ಅರ್ಧಭಾಗವನ್ನು ಠಾಕೂರ್ ಅವರು ಕೂಗಿದ್ದು ಉಳಿದ ಅರ್ಧ ಭಾಗವನ್ನು ಜನರು ಕೂಗಿದ್ದಾರೆ. ಇದರ ಅರ್ಥ ದೇಶದ್ರೋಹಿಗಳನ್ನು ಗುಂಡಿಕ್ಕಿ ಎಂದು ಆಗಿದೆ.
ಅನುರಾಗ್ ಠಾಕೂರ್ ಅವರ ಹೇಳಿಕೆ ನಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳ ಬಳಿ ವರದಿ ಕೇಳಲಾಗಿದೆ. ಹೇಳಿಕೆ ಹಾಗೂ ಘೋಷಣಾ ವಾಕ್ಯಗಳ ಸಂಬಂಧ ಈ ವರೆಗೂ ಯಾವುದೇ ದೂರುಗಳೂ ದಾಖಲಾಗಿಲ್ಲ ಎಂದು ದೆಹಲಿ ಸಿಇಒ ಕಚೇರಿ ಮಾಹಿತಿ ನೀಡಿದೆ.
ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಠಾಕೂರ್ ಅವರು, ಪ್ರಚೋದನಾಕಾರಿ ಘೋಷಣೆ ಕೂಗಿದ್ದರು. ಭಾಷಣದ ವೇಳೆ ಕೈಗಳನ್ನು ಎತ್ತಿ ದೇಶದ್ರೋಹಿಗಳನ್ನು ಎಂದು ಕೂಗಿದ ಅನುರಾಗ್ ಅವರ ಜೊತೆಗೆ ಗೋಲಿ ಮಾರೋ ಎಂದು ಸಭೆಯಲ್ಲಿ ಸೇರಿದ್ದ ಜನರೆಲ್ಲಾ ಆಕ್ರೋಶದಿಂದ ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.