ಚಿಕ್ಕಮಗಳೂರು, ಜ 28 ( Daijiworld News/MB) : "ಸಚಿವ ಸಿ.ಟಿ.ರವಿ ಅವರನ್ನು ನೋಡಿ ನನಗೆ ಹೊಟ್ಟೆ ಕಿಚ್ಚು ಆಗಿದೆ" ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಈ ಮಾತನಾಡಿದ ಅವರು, "ನಾನು ಸಮಾಜ ಕಲ್ಯಾಣ ಸಚಿವನಾಗಿ ನನ್ನ ಜಿಲ್ಲೆಗೆ ಇಷ್ಟೊಂದು ಹಣ ಅನುದಾನ ತೆಗೆದುಕೊಂಡಿಲ್ಲ, ಆದರೆ ಸಿ.ಟಿ ರವಿ ಅವರು ಜಿಲ್ಲೆಯ ಅಭಿವೃದ್ಧಿಗೆ 959 ಕೋಟಿ ರೂ. ಹಣ ಅನುದಾನ ತಂದಿದ್ದಾರೆ. ನನಗೆ ಅವರನ್ನು ನೋಡಿ ಹೊಟ್ಟೆ ಕಿಚ್ಚು ಆಗಿದೆ" ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸಮಾಜ ಕಲ್ಯಾಣ ಹಾಗೂ ಲೊಕೋಪಯೋಗಿ ಇಲಾಖೆ ವ್ಯಾಪ್ತಿಯ 90 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಇಂದು ಮಾಡಲಾಯಿತು. ನಾನು ಇಂದು ಬರುತ್ತಿರಲಿಲ್ಲ. ತುಂಬಾ ಕೆಲಸವಿತ್ತು. ರೈಲ್ವೆ ಇಲಾಖೆ ಸಭೆಗೆ ಹೋಗಬೇಕಿತ್ತು. ಆದರೆ ಸೋಮವಾರ ಸಿ.ಟಿ ರವಿಯವರು ಬೈದದ್ದನ್ನು ನೋಡಿ ಇಂದು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಸಂಪೂರ್ಣ ಸಹಮತ ಇರುತ್ತದೆ ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಶಾಸಕ ಬೋಜೇಗೌಡ, ಪ್ರಾಣೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಸೇರಿ ವಿವಿಧ ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.