ಚಿತ್ರದುರ್ಗ, ಜ 28 ( Daijiworld News/MB) : ಕುಮಾರಸ್ವಾಮಿಗೆ ತಾಕತ್ತಿದ್ದರೆ ಶಿಸ್ತು ಹಾಗೂ ದೇಶಭಕ್ತಿ ಬೆಳೆಸುವ ಆರ್ಎಸ್ಎಸ್ ಹಾಗೂ ಭಜರಂಗದಳ ಸಂಘಟನೆಯನ್ನು ಬ್ಯಾನ್ ಮಾಡಲಿ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು ಹಾಕಿದ್ದಾರೆ.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ ಅವರು, ಆರ್ಎಸ್ಎಸ್, ಭಜರಂಗದಳ ನಿಷೇಧಿಸುವಂತೆ ಕುಮಾರಸ್ವಾಮಿ ಹೇಳಿಕೆಯ ಕುರಿತು ಮಾತನಾಡಿ, ಆರ್ಎಸ್ಎಸ್ 1947ರಿಂದ ಹಿಂದೂ ಸಮಾಜಕ್ಕೆ ರಕ್ಷಕರಾಗಿ ಬೆಳೆದಿದೆ. ಆದರೆ ಆರ್ಎಸ್ಎಸ್ ನಾಶ ಮಾಡುವ ಯತ್ನವನ್ನು ರಾಜಕೀಯ ಎದುರಾಳು ಮಾಡಿದ್ದಾರೆ. ಗಾಂಧೀಜಿ ಹತ್ಯೆ ಪ್ರಕರಣವನ್ನು ಮುಂದಿಟ್ಟು ಆರ್ಎಸ್ಎಸ್ ನಿಷೇಧ ಮಾಡಿದ್ದರು. ಆದರೆ ಜನಬೆಂಬಲದಿಂದಾಗಿ ಆರ್ಎಸ್ಎಸ್ ಮರು ಬೆಳೆದು ದೇಶದಲ್ಲಿನ ಹಿಂದೂಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ. ಹಿಂಸೆ ಮೇಲೆ ನಂಬಿಕೆ ಇಟ್ಟಿರುವ ಸಂಘಟನೆ ಆರ್ಎಸ್ಎಸ್ ಅಲ್ಲ. ಅದಕ್ಕೆ ಆರ್ಎಸ್ಎಸ್ ಚರಿತ್ರೆಯನ್ನು ಓದಬೇಕು. ಕುಮಾರಸ್ವಾಮಿಗೆ ತಾಕತ್ತಿದ್ದರೆ ಶಿಸ್ತು ಹಾಗೂ ದೇಶಭಕ್ತಿ ಬೆಳೆಸುವ ಆರ್ಎಸ್ಎಸ್ ಹಾಗೂ ಭಜರಂಗದಳ ಸಂಘಟನೆಯನ್ನು ಬ್ಯಾನ್ ಮಾಡಲಿ ಎಂದು ಹೇಳಿದರು.
ಕ್ರೈಸ್ತರು, ಮುಸಲ್ಮಾನರು ಪಾಶ್ಚಾತ್ಯ ದೃಷ್ಠಿಕೋನದವರಾಗಿದ್ದು ಆದ್ದರಿಂದಲ್ಲೇ ನಮ್ಮ ಮೇಲೆ ನಕ್ಸಲರಿಂದ ದಾಳಿ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಅಷ್ಟು ಮಾತ್ರವಲ್ಲದೇ ನಮ್ಮ ಹೆಣ್ಣು ಮಕ್ಕಳನ್ನು ಹಾರಿಸಿಕೊಂಡು ಹೋಗಲಾಗುತ್ತಿದೆ. ಗೋವುಗಳ ಮಾರಣಹೋಮ ಮಾಡಲಾಗುತ್ತಿದೆ. ಇವೆಲ್ಲವನ್ನು ತಡೆದು ಹಿಂದೂ ಸಮಾಜ ರಕ್ಷಣೆಗೆ ಬೇಕಾಗಿ ಆರ್ಎಸ್ಎಸ್ ಹೋರಾಟ ಮಾಡುತ್ತಿದೆ ಎಂದರು.
ನಾವು ಗಾಂಧೀಜಿ ಹೇಳಿದ ಮತಾಂತರ, ಗೋಹತ್ಯೆ ನಿಷೇಧದ ಪರವಾಗಿಯೇ ಹೋರಾಡುತ್ತಿದ್ದೇವೆ. ಆದರೆ ಈಗ ಇರುವವರು ನಕಲಿ ಗಾಂಧಿಗಳು, ಢೋಂಗಿಗಳು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಲ್ನಲ್ಲಿ ಗೋಮಾಂಸ ತಿನ್ನುವುದಾಗಿ ಹೇಳಿದ್ದರು. ಕಾಂಗ್ರೆಸ್ಸಿನವರು ಸೇರಿದಂತೆ ಯಾರೂ ಕೂಡಾ ಗಾಂಧೀಜಿ ಹೇಳಿದ ಮಾತನ್ನು ಪಾಲನೆ ಮಾಡುತ್ತಿಲ್ಲ ಎಂಬುದು ಅದರಿಂದಲ್ಲೇ ತಿಳಿಯುತ್ತದೆ. ಆರ್ಎಸ್ಎಸ್ ಮಾತ್ರ ಗಾಂಧೀಜಿ ಅವರ ಮಾತನ್ನು ಕೇವಲ ಪಾಲಿಸುತ್ತಿದೆ ಎಂದು ಹೇಳಿದರು.
ಅನೇಕ ವರ್ಷದಿಂದ ಪಿಎಫ್ಐಗೆ ಹೊರ ದೇಶದಿಂದ ಹಣ ಬರುತ್ತಿದೆ. ಇದರಿಂದಾಗಿ ಅವರು ಮೆರೆಯುತ್ತಿದ್ದಾರೆ. ಇವೆಲ್ಲದಕ್ಕೆ ಕಡಿವಾಣ ಹಾಕಲೇಬೇಕು. ಅವೆಲ್ಲವನ್ನು ಮಾಡಲು ನಮ್ಮ ದೇಶದಲ್ಲಿ ಮೋದಿಯವರು ಹುಟ್ಟಿದ್ದು, ಹಾಗಾಗಿ ಅವರು ಎಲ್ಲಾ ಹಿಂಸಾತ್ಮಕ ಕೃತ್ಯಗಳನ್ನು ತಡೆಗಟ್ಟುವ ಕಾರ್ಯ ಮಾಡುತ್ತಿರುವುದು ಎಂದು ಮೋದಿಯನ್ನು ಹೊಗಳಿದರು.
ಡಾ. ಅಂಬೇಡ್ಕರ್ ಅವರು ರಾಷ್ಟ್ರೀಯ ದೃಷ್ಟಿಕೋನವುಳ್ಳ ಶ್ರೇಷ್ಠ ಮನುಷ್ಯರು ಎಂಬ ಕಾರಣಕ್ಕಾಗಿ ಆರ್ಎಸ್ಎಸ್ ಪ್ರತಿ ಶಿಬಿರಗಳಲ್ಲಿ ಅಂಬೇಡ್ಕರ್ ಬಗ್ಗೆ ವಿಚಾರ ಚಿಂತನೆಗಳನ್ನು ನಡೆಸಲಾಗುತ್ತದೆ. ಅವರ ವಿಚಾರಧಾರೆಗಳು ಎಲ್ಲರಿಗೂ ಪ್ರೇರೇಪಣೆ ಮಾಡುವಂತದ್ದು ಎಂದು ಹೇಳಿದರು.