ನವದೆಹಲಿ, ಜ 28 ( Daijiworld News/MB) : ಶಾಹೀನ್ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇದೇ ರೀತಿಯಲ್ಲಿ ನಡೆಯುತ್ತಿದ್ದರೆ ದೆಹಲಿಯೂ ಕಾಶ್ಮೀರದಲ್ಲಿರುವಂಥ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ. ಸಿಎಎ ಪ್ರತಿಭಟನಾಕಾರರು ಮನೆಗೆ ನುಗ್ಗಿ ಅತ್ಯಾಚಾರ ಮಾಡಬಹುದು ಎಚ್ಚರ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.
ಕಾಶ್ಮೀರದಲ್ಲಿಯೂ ಇಂತಹ ಕಿಚ್ಚು ಹಲವು ವರ್ಷಗಳ ಹಿಂದೆ ಹಬ್ಬಿಕೊಂಡಿತ್ತು ಎಂಬುದು ಜನರಿಗೆ ತಿಳಿದಿದೆ. ಅಲ್ಲಿ ಕಾಶ್ಮೀರಿ ಪಂಡಿತರ ಹೆಣ್ಮಕ್ಕಳ ಮತ್ತು ಸಹೋದರಿಯರ ಮೇಲೆ ಅತ್ಯಾಚಾರ ಮಾಡಲಾಗುತ್ತಿತ್ತು. ಆನಂತರ ಅಂತಹದ್ದೆ ಘಟನೆಗಳು ಉತ್ತರಪ್ರದೇಶ, ಹೈದರಾಬಾದ್, ಕೇರಳದಲ್ಲಿ ನಡೆದಿತ್ತು. ಇಂದು ದೆಹಲಿಯಲ್ಲಿ ನಡೆಯುತ್ತಿದೆ ಎಂದರು.
ಶಾಹೀನ್ಬಾಗ್ ಪ್ರತಿಭಟನಕಾರರಿಗೆ ದೆಹಲಿ ಸರ್ಕಾರ ಬೆಂಬಲ ನೀಡುತ್ತಿರುವ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಹೀನ್ಬಾಗ್ ಪ್ರತಿಭಟನಕಾರರಿಗೆ ಅರವಿಂದ ಕೇಜ್ರಿವಾಲ್ ಬೆಂಬಲ ನೀಡುತ್ತಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಕೂಡಾ ಅದನ್ನು ಹೇಳಿದ್ದರು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಪೌರತ್ವ ವಿರೋಧಿ ಹೋರಾಟದಲ್ಲಿ ಲಕ್ಷಾನುಗಟ್ಟಲೆ ಜನರು ನೆರೆದಿದ್ದಾರೆ. ಅಲ್ಲಿನ ಕಿಚ್ಚು ಯಾವ ಸಂದರ್ಭದಲ್ಲೂ ದೆಹಲಿಯ ಮನೆಯೊಳಗೆ ನುಗ್ಗಬಹುದು. ನಮ್ಮ ಮನೆಗೆ ನುಗ್ಗಬಹುದು. ಆ ಹಿನ್ನಲೆಯಲ್ಲಿ ದೆಹಲಿಯ ಜನತೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಜನರು ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಣ್ಣು ಮಕ್ಕಳು, ಸಹೋದರಿಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಮಾಡಬಹುದು, ಕೊಲ್ಲಬಹುದು ಎಂದು ಹೇಳಿದ್ದಾರೆ.
ಇಂದು ನಿಮಗೆ ಸಮಯವಿದೆ. ನಿಮ್ಮ ರಕ್ಷಣೆಗೆಂದು ಮೋದಿ, ಅಮಿತ್ ಶಾ ಬರಲಾರರು. ಇಂದು ನೀವು ಎಚ್ಚೆತ್ತರೆ ಒಳ್ಳೆಯದು. ಇಲ್ಲಿನ ಜನತೆ ಮೋದಿಯವರು ದೇಶದ ಪ್ರಧಾನಿಯಾಗಿ ಇರುವವರೆಗೆ ಸುರಕ್ಷಿತರಾಗಿರುತ್ತಾರೆ. ಅದು ಬಿಟ್ಟು ಬೇರೆ ಯಾರಾದರೂ ಪ್ರಧಾನಿಯಾದಲ್ಲಿ ದೇಶದ ಜನರು ಸುರಕ್ಷಿತರಾಗಿರಲ್ಲ ಎಂದರು.