ನವದೆಹಲಿ, ಜ 28 ( Daijiworld News/MB) : ದೇಶದ್ರೋಹದ ಆರೋಪ ಎದುರಿಸುತ್ತಿರುವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಶರ್ಜೀಲ್ ಇಮಾಮ್ ರನ್ನು ಅವರ ಹುಟ್ಟೂರಾದ ಬಿಹಾರದ ಜೆಹೆನಾಬಾದ್ ಎಂಬಲ್ಲಿ ಬಂಧಿಸಲಾಗಿದೆ.
ದೇಶವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಶರ್ಜೀಲ್ ಮೇಲೆ ಇದ್ದು ವಿಡಯೋವನ್ನು ಆಧರಿಸಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು..
ಇಡೀ ಈಶಾನ್ಯ ಪ್ರದೇಶವನ್ನು ಭಾರತ ದೇಶದಿಂದ ಪ್ರತ್ಯೇಕ ಮಾಡಬೇಕು ಎಂದು ಅವರು ಹೇಳಿದ್ದಾರೆ ಎಂದು ಆರೋಪಿಸಿ ಆವರ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿತ್ತು.
ಅವರ ವಿರುದ್ಧವಾಗಿ ಅರುಣಾಚಲ ಪ್ರದೇಶ, ಅಸ್ಸಾಂ, ಉತ್ತರ ಪ್ರದೇಶ, ಮಣಿಪುರದಲ್ಲೂ ಪ್ರಕರಣಗಳು ದಾಖಲಾಗಿವೆ. ಐದು ಪೊಲೀಸ್ ತಂಡಗಳು ಅವರ ಶೋಧಕ್ಕಾಗಿ ಮುಂಬೈ, ಪಾಟ್ನಾ ಹಾಗೂ ದೆಹಲಿಗೆ ತೆರಳಿದ್ದರು.
ಶರ್ಜೀಲ್ ಎರಡು ಸಂದರ್ಭಗಳಲ್ಲಿ ವಿಭಜನಾತ್ಮಕ ಭಾಷಣ ಮಾಡಿದ್ದಾರೆ. ಡಿಸೆಂಬರ್ನಲ್ಲಿ ಜಾಂಇಯಾ ಮಿಲ್ಲಿಯಾ ವಿವಿಯಲ್ಲಿ ಒಂದು ಭಾಷಣ ಹಾಗೂ ಇನ್ನೊಂದು ಭಾಷಣವನ್ನು ಆಲಿಘರ್ ಮುಸ್ಲಿಂ ವಿವಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಶಾಹೀನ್ಬಾಗ್ನಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ಆಯೋಜಕರು ಅವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಓರ್ವ ವ್ಯಕ್ತಿ ನಮ್ಮ ಪ್ರತಿಭಟನೆಯ ಆಯೋಜನೆ ಮಾಡಿಲ್ಲ ಎಂದು ಈ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.