ನವದೆಹಲಿ, ಜ 29 (Daijiworld News/MB) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ "ತಿಹಾರ್ ಜೈಲಿನಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ" ಎಂದು ಆರೋಪ ಮಾಡಿದ್ದು ನ್ಯಾ| ಆರ್. ಭಾನುಮತಿ ನೇತೃತ್ವದ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಆತ ಗಲ್ಲು ಶಿಕ್ಷೆಯಿಂದ ತಪ್ಪಿಸುವ ಸಲುವಾಗಿ ಈ ರೀತಿ ಆರೋಪ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.
ನನ್ನನ್ನು ಒಬ್ಬನನ್ನೇ ಪ್ರತ್ಯೇಕವಾಗಿ ಇರಿಸಲಾಗಿದ್ದು ಜೈಲಾಧಿಕಾರಿಗಳು ನನ್ನ ವಿಚಾರದಲ್ಲಿ ಇನ್ನಿತರ ನಿಯಮ ಉಲ್ಲಂಘನೆ ಮಾಡುತ್ತಾರೆ ಎಂದು ಅರ್ಜಿಸಲ್ಲಿಸಿದ್ದಾನೆ.
ಆತನ ಪರ ವಕೀಲೆ ಅಂಜನಾ ಪ್ರಕಾಶ್ ಅವರು ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಲ್ಲ. ನೀವು ಇನ್ನೊಬ್ಬರ ಜೀವದೊಂದಿಗೆ ಆಟವಾಡುತ್ತಿದ್ದೀರಿ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆರೋಪ ಮಾಡಿದ್ದಾರೆ.
ಈ ಕುರಿತಾಗಿ ನ್ಯಾಯಾಪೀಠ ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿಗಳಿ ಮುಂದಿಡಲಾಗಿಲ್ಲ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ ಎಂದು ಪ್ರಶ್ನಿಸಿದ್ದು ಅಂಜನಾ ಪ್ರಕಾಶ್ ಅವರು "ಮುಕೇಶ್ ಸಿಂಗ್ಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಆತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತಗೊಳ್ಳುವ ಮೊದಲೇ ಆತನನ್ನು ಪ್ರತ್ಯೇಕವಾಗಿ ಬಂಧಿಸಿ ಇರಿಸಲಾಗಿತ್ತು ಎಂದು ಹೇಳಿದರು.
ದೆಹಲಿ ಪೊಲೀಸ್ ಇಲಾಖೆ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅವರು ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ, "ಜೈಲಿನಲ್ಲಿ ಅನುಚಿತವಾಗಿ ನಡೆಸಿಕೊಂಡಿದ್ದಾರೆ ಎಂಬುದು ಕ್ಷಮೆ ನೀಡಲು ಕಾರಣವಾಗಬಾರದು. ಹಾಗೆಯೇ ಮುಕೇಶ್ ಸಿಂಗ್ ಬಗ್ಗೆ ಇರುವ ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಕ್ಷಮಾದಾನ ನೀಡಬಹುದೇ ಎಂಬ ವಿಚಾರವು ರಾಷ್ಟ್ರಪತಿಗೆ ಕಾನೂನಾತ್ಮಕವಾಗಿ ಸಹಮತವಾಗುವಂತೆ ಇರಬೇಕು. ಹೀಗಾಗಿ, ಇಂಥ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಸಾಲಿಸಿಟರ್ ಜನರಲ್ ಮನವಿ ಮಾಡಿಕೊಂಡರು. ಕೊನೆಗೆ ಈ ಅರ್ಜಿ ಕುರಿತ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ಕಾಯ್ದಿರಿಸಿತು.