ಕೋಲ್ಕತಾ, ಜ 29 (Daijiworld News/MB) : "ನೋಟು ನಿಷೇಧ ಮಾಡಿದ ಸಂದರ್ಭದಲ್ಲಿ ಬ್ಯಾಂಕುಗಳಿಂದ ಹಣವನ್ನು ಪಡೆಯಲು ಸಾಲಿನಲ್ಲಿ ನಿಂತ ಹಲವರು ಮೃತಪಟ್ಟಿದ್ದಾರೆ. ಆದರೆ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಶಾಹೀನ್ ಬಾಗ್ನಲ್ಲೇಕೆ ಯಾರೂ ಸತ್ತಿಲ್ಲ" ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ ಘೋಷ್ ಅವರು ಪ್ರಶ್ನಿಸಿದ್ದು ವಿವಾದ ಸೃಷ್ಟಿಸಿದ್ದಾರೆ.
"ಸಿಎಎ ಮತ್ತು ಎನ್ಆರ್ಸಿ ಕುರಿತು ಆತಂಕ ಉಂಟಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 30 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಅಲ್ಲಿನ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅವರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಗೋಷ್ ಅವರು, "ದೆಹಲಿಯಲ್ಲಿ ಈ ತೀವ್ರ ಚಳಿಗಾಲದ ರಾತ್ರಿಯಲ್ಲೂ ಮಹಿಳೆಯರು ಮತ್ತು ಮಕ್ಕಳು ತೆರೆದ ಮೈದಾನದಲ್ಲಿ ಕುಳಿತು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಅವರಲ್ಲಿ ಯಾರೊಬ್ಬರೂ ಯಾಕೆ ಅಸೌಖ್ಯ ಹೊಂದಿಲ್ಲ?ಅವರಿಗೆ ಯಾಕೆ ಏನೂ ಆಗುತ್ತಿಲ್ಲ? ಒಬ್ಬನೇ ಒಬ್ಬ ಪ್ರತಿಭಟನಾಕಾರ ಯಾಕೆ ಸತ್ತಿಲ್ಲ? ಎಂದು ನನಗೆ ಆಶ್ಚರ್ಯವಾಗುತ್ತಿದೆ" ಎಂದು ಹೇಳಿದ್ದಾರೆ.
"ಇದು ಅಸಂಬದ್ಧ, ಅವರಿಗೆ ಏನೂ ಆಗದಿರಲು ಅವರೇನು ಮಕರಂಧ ಸೇವನೆ ಮಾಡಿದ್ದಾರೆಯೇ? ಆದರೆ ಬಂಗಾಳದಲ್ಲಿ ಮಾತ್ರ ಕೆಲವರು ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಹೇಳಲಾಗುತ್ತಿದೆ ಎಂದರು.
ಹಾಗೆಯೇ "ಶಾಹೀನ್ಬಾಗ್ ಮತ್ತು ಪಾರ್ಕ್ ಸರ್ಕಸ್ ಮೈದಾನದಲ್ಲಿ ಪ್ರತಿಭಟನೆ ಮಾಡುವವರಿಗೆ ಹಣಕಾಸು ಸಹಾಯ ಮಾಡುವವರು ಯಾರು?" ಎಂದು ಪ್ರಶ್ನಿಸಿದರು.
"ಅವರಿಗೆ ಎಲ್ಲಿಂದ ಹಣ ಬರುತ್ತಿದೆ ಎಂದು ನಮಗೆ ಆಶ್ಚರ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸತ್ಯ ಹೊರಬಲಿದೆ' ಎಂದು ಹೇಳಿದ್ದಾರೆ.