ಬೋಪಾಲ್, ಜ 29 (Daijiworld News/MSP): ದೇಶಾದ್ಯಂತ ಪ್ರತಿಭಟನೆಯ ನಂತರವೂ ನರೇಂದ್ರ ಮೋದಿ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದರೂ, ಇದಕ್ಕೆ ವಿಭಿನ್ನವಾಗಿ ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಸಿಎಎಗೆ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ . ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಸ್ವಪಕ್ಷದ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ.
ಈ ಕಾನೂನಿನಿಂದ , ದೇಶದ ಪ್ರತಿ ಬೀದಿಗಳಲ್ಲಿ ಆಂತರಿಕ ಯುದ್ದದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿಎಎ ದೇಶಕ್ಕೆ ಪ್ರಯೋಜನಕಾರಿಯಲ್ಲದಿದ್ದರೂ ವಿವಾದಾತ್ಮಕ ಕ್ರಮವು ಕೇಸರಿ ಪಕ್ಷದ ಮತ-ಬ್ಯಾಂಕ್ ಅನ್ನು ಬಲಪಡಿಸುತ್ತದೆ ಎಂದು ಬಿಜೆಪಿ ಶಾಸಕ ನಾರಾಯಣ್ ತ್ರಿಪಾಠಿ ಹೇಳಿದ್ದಾರೆ.
ನಾವು ದೇಶದ ಸಂವಿಧಾನದ ಪ್ರಕಾರ ದೇಶ ನಡೆಸಬೇಕು. ಇಲ್ಲವಾದರೆ ಬಿಜೆಪಿ ತನ್ನದೇ ಆದ ಹೊಸ ಸಂವಿಧಾನ ತರಲಿ, ಎಲ್ಲರಿಗೂ ಸಮಾನತೆ ನೀಡುವ ಅಂಬೇಡ್ಕರ್ ಅವರ ಸಂವಿಧಾನವನ್ನು ಹರಿದು ಬಿಸಾಕಲಿ. ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಸಾಧ್ಯವಿಲ್ಲ ಎಂದು ನಾರಾಯಣ ತ್ರಿಪಾಠಿ ತನ್ನದೇ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಅದಾಗ್ಯೂ, ಸಿಎಎ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಲಿಲ್ಲ. “ನಾನು ಕಾಂಗ್ರೆಸ್ ಸೇರಲು ಸಿದ್ಧನಿಲ್ಲ, ಯಾವುದೇ ಕಾರಣಕ್ಕೂ ಬಿಜೆಪಿಯನ್ನು ತೊರೆಯುವುದಿಲ್ಲ. ಸಿಎಎ ಅನ್ನು ಮತ-ಬ್ಯಾಂಕ್ಗಾಗಿ ಮಾತ್ರ ಜಾರಿಗೊಳಿಸಲಾಗಿದ್ದು, ಇದು ಬಿಜೆಪಿಗೆ ಲಾಭವಾಗುತ್ತಿದೆ. ಇದು ದೇಶಕ್ಕೆ ಪ್ರಯೋಜನವಾಗುವುದಿಲ್ಲ, ಇದು“ ನನ್ನ ಅನುಭವದ ಆಧಾರದ ಮಾತುಗಳು" ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.